
ನವದೆಹಲಿ, 24 ಜೂನ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಅಂತಿಮ ಹಂತ ತಲುಪಿದ್ದು, ಎರಡೂ ರಾಷ್ಟ್ರಗಳು ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಿವೆ. ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು, ಭಾರತದೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ನಾವು ಅತ್ಯಂತ ಸಮೀಪದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ರಾಜಧಾನಿ ನವದೆಹಲಿಯ ವಾಣಿಜ್ಯ ಭವನದಲ್ಲಿ ನಡೆದ ಎರಡು ದಿನಗಳ ಸಚಿವ ಮಟ್ಟದ ಸಭೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ನೇತೃತ್ವದ ನಿಯೋಗಗಳು ಪಾಲ್ಗೊಂಡಿದ್ದವು.
ಸಭೆಯಲ್ಲಿ ಮಾರುಕಟ್ಟೆ ಪ್ರವೇಶಕ್ಕೆ ಹೆಚ್ಚಿನ ಅವಕಾಶ, ಡಿಜಿಟಲ್ ವ್ಯಾಪಾರ ವಿಸ್ತರಣೆ, ಸುಂಕೇತರ ಅಡೆತಡೆಗಳನ್ನು ಕಡಿಮೆ ಮಾಡುವುದು ಹಾಗೂ ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಬಲಪಡಿಸುವ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ಸಮಗ್ರ ಬಿಟಿಎಗೆ ಮುನ್ನುಡಿಯಾಗುವ ಮಧ್ಯಂತರ ಒಪ್ಪಂದವನ್ನು ಅಂತಿಮಗೊಳಿಸುವ ಮಾರ್ಗಗಳ ಕುರಿತು ಎರಡೂ ದೇಶಗಳು ಸಮಾಲೋಚನೆ ನಡೆಸಿದವು.
ಅಮೆರಿಕವು ಫೆಬ್ರವರಿ 24ರಂದು ತನ್ನ ಎಲ್ಲಾ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ವಿಧಿಸಿದ್ದ ತಾತ್ಕಾಲಿಕ ಶೇ.10ರ ಆಮದು ಸುಂಕದ ಅವಧಿ ಜುಲೈ 24ರಂದು ಕೊನೆಗೊಳ್ಳಲಿದ್ದು, ಅದರ ಮುನ್ನವೇ ಒಪ್ಪಂದವನ್ನು ಪೂರ್ಣಗೊಳಿಸಲು ಎರಡೂ ದೇಶಗಳು ತೀವ್ರ ಪ್ರಯತ್ನ ನಡೆಸುತ್ತಿವೆ. ಈ ವ್ಯಾಪಾರ ಒಪ್ಪಂದದ ರೂಪುರೇಷೆಯನ್ನು ಇದೇ ವರ್ಷದ ಫೆಬ್ರವರಿಯಲ್ಲಿ ಘೋಷಿಸಲಾಗಿತ್ತು.
ಸಭೆಯ ಬಳಿಕ ಮಾತನಾಡಿದ ಪಿಯೂಷ್ ಗೋಯಲ್, “ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಮತ್ತು ಅವರ ನಿಯೋಗದೊಂದಿಗೆ ಮಹತ್ವದ ಸಭೆ ನಡೆಸಿದ್ದೇವೆ. ಭಾರತ–ಅಮೆರಿಕ ವ್ಯಾಪಾರ ಮಾತುಕತೆಗಳ ಪ್ರಗತಿಯನ್ನು ಪರಿಶೀಲಿಸಿ, ಆರ್ಥಿಕ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದೇವೆ. ಗ್ರೀರ್ ಅವರ ನಾಯಕತ್ವ ಹಾಗೂ ಎರಡೂ ತಂಡಗಳ ನಿರಂತರ ಪ್ರಯತ್ನದಿಂದ ಮಾತುಕತೆಗಳು ರಚನಾತ್ಮಕ ಮತ್ತು ಭವಿಷ್ಯಮುಖಿಯಾಗಿ ಸಾಗುತ್ತಿವೆ” ಎಂದು ಹೇಳಿದರು.
ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು, “ಈ ಒಪ್ಪಂದವು 140 ಕೋಟಿ ಜನಸಂಖ್ಯೆಯ ಭಾರತೀಯ ಮಾರುಕಟ್ಟೆಯನ್ನು ಪರಸ್ಪರ ಲಾಭದಾಯಕ ಮತ್ತು ನ್ಯಾಯಸಮ್ಮತ ಷರತ್ತುಗಳಡಿ ಅಮೆರಿಕದ ಉತ್ಪನ್ನಗಳಿಗೆ ಇನ್ನಷ್ಟು ಮುಕ್ತಗೊಳಿಸಲಿದೆ. ಭಾರತ ಮತ್ತು ಅಮೆರಿಕ ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಅತ್ಯಂತ ಸಮೀಪದಲ್ಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.