ಪ್ರಜಾಪ್ರಭುತ್ವದ ರಕ್ಷಣೆಗೆ ಸಮಾಜ ಸದಾ ಜಾಗೃತವಾಗಿರಬೇಕು : ಸುನೀಲ್ ಅಂಬೇಕರ್
ತುರ್ತು ಪರಿಸ್ಥಿತಿ ವಿರೋಧಿ ಹೋರಾಟವು ಸರ್ವಾಧಿಕಾರದ ಮೇಲೆ ಪ್ರಜಾಪ್ರಭುತ್ವದ ವಿಜಯದ ಸಂಕೇತ
ಸುನೀಲ್ ಅಂಬೇಕರ


ಪಾಟ್ನಾ, 24 ಜೂನ್ (ಹಿ.ಸ.) :

ಆ್ಯಂಕರ್ : ತುರ್ತು ಪರಿಸ್ಥಿತಿ ಜಾರಿಯಾದ ಬಳಿಕ 50 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದ್ದರೂ ಅದರ ಪ್ರಸ್ತುತತೆ ಇಂದಿಗೂ ಅಷ್ಟೇ ಮಹತ್ವದ್ದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಹೇಳಿದ್ದಾರೆ.

ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳನ್ನು ಜೀವಂತವಾಗಿಡಲು ಆ ಕಾಲದ ಹೋರಾಟವನ್ನು ನಿರಂತರವಾಗಿ ಸ್ಮರಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಬುಧವಾರ ಬಿಹಾರದ ಪಟ್ನಾದ ಮಿಠಾಪುರ್ ಇನ್ಸ್ಟಿಟ್ಯೂಷನಲ್ ಪ್ರದೇಶದಲ್ಲಿ ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿಯ 50 ವರ್ಷಗಳು: ಬಿಹಾರ ಚಳವಳಿ ಮತ್ತು ಎಮರ್ಜೆನ್ಸಿ’ ವಿಷಯದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಕೇವಲ ಇತಿಹಾಸದ ಒಂದು ಅಧ್ಯಾಯವಲ್ಲ, ಪ್ರಜಾಪ್ರಭುತ್ವದ ರಕ್ಷಣೆಗೆ ಸಮಾಜದ ಎಚ್ಚರಿಕೆಯ ಅತ್ಯುತ್ತಮ ಉದಾಹರಣೆ ಎಂದರು.

ಮುಂದಿನ ಪೀಳಿಗೆಗಳು ಆ ಕಾಲದ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಜಕೀಯ ಪಕ್ಷವಾಗಿರದಿದ್ದರೂ, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಅದರ ಮೇಲೆ ನಿಷೇಧ ಹೇರಲಾಗಿತ್ತು. ಸ್ವಾತಂತ್ರ್ಯಾನಂತರ ಕೆಲವು ರಾಜಕೀಯ ಶಕ್ತಿಗಳು ಸಂಘವನ್ನು ತಮ್ಮ ಪ್ರತಿಸ್ಪರ್ಧಿಯೆಂದು ಪರಿಗಣಿಸಿ ಅದನ್ನು ದುರ್ಬಲಗೊಳಿಸುವ ಮನೋಭಾವ ಹೊಂದಿದ್ದವು ಎಂದು ಅವರು ಆರೋಪಿಸಿದರು.

ಸಂಘದ ಮೇಲಿನ ನಿಷೇಧವು ಕೇವಲ ಆಡಳಿತಾತ್ಮಕ ನಿರ್ಧಾರವಾಗಿರದೆ ರಾಜಕೀಯ ಕಾರಣಗಳಿಂದ ಪ್ರೇರಿತವಾಗಿತ್ತು ಎಂದು ಹೇಳಿದರು.

ಜಗತ್ತಿನ ಅನೇಕ ದೇಶಗಳಲ್ಲಿ ಸರ್ವಾಧಿಕಾರ ದಶಕಗಳವರೆಗೆ ಮುಂದುವರಿದಿದ್ದರೂ, ಭಾರತದಲ್ಲಿ ಸಮಾಜದ ಜಾಗೃತಿ ಮತ್ತು ಪ್ರಜಾಪ್ರಭುತ್ವದ ಅರಿವಿನ ಕಾರಣದಿಂದ ಕೇವಲ 19 ತಿಂಗಳಲ್ಲೇ ತುರ್ತು ಪರಿಸ್ಥಿತಿ ಕೊನೆಗೊಂಡಿತು ಎಂದು ಅಂಬೇಕರ್ ಹೇಳಿದರು.

ದೊಡ್ಡ ರಾಜಕೀಯ ನಾಯಕರು ಜೈಲಿನಲ್ಲಿದ್ದ ಸಂದರ್ಭದಲ್ಲಿಯೂ ಸಂಘದ ಸಾಮಾನ್ಯ ಕಾರ್ಯಕರ್ತರು ಮತ್ತು ಪ್ರಜಾಪ್ರಭುತ್ವ ಪರ ನಾಗರಿಕರು ಹೋರಾಟ ಮುಂದುವರಿಸಿದರು. ಇದೇ ಕಾರಣದಿಂದ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.

“ಸಮಾಜ ಜಾಗೃತವಾಗಿರದಿದ್ದರೆ ಭಾರತವೂ ದೀರ್ಘಕಾಲ ಸರ್ವಾಧಿಕಾರದ ಬಲಿಯಾಗುವ ಸಾಧ್ಯತೆ ಇತ್ತು. ಆದ್ದರಿಂದ ಸಮಾಜದಲ್ಲಿ ಯಾವಾಗಲೂ ಸರ್ವಾಧಿಕಾರಿ ಪ್ರವೃತ್ತಿಗಳನ್ನು ನಿಯಂತ್ರಿಸುವ ಶಕ್ತಿ ಇರಬೇಕು,” ಎಂದು ಅವರು ಹೇಳಿದರು.

ಸಂಘದ ಹೋರಾಟವು ಅಧಿಕಾರ ಪಡೆಯುವುದಕ್ಕಾಗಲಿ ಅಥವಾ ಸಂಘದ ಮೇಲಿನ ನಿಷೇಧ ತೆರವುಗೊಳಿಸುವುದಕ್ಕಾಗಲಿ ಇರಲಿಲ್ಲ. ಅದು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಗೆ ನಡೆಸಿದ ಹೋರಾಟವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು. ಇದು ಅಧಿಕಾರ ಬದಲಾವಣೆಯ ಹೋರಾಟವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ಹೋರಾಟವಾಗಿತ್ತು ಎಂದರು.

ತುರ್ತು ಪರಿಸ್ಥಿತಿಯನ್ನು ಅವರು ರಾಷ್ಟ್ರದ ಚರಿತ್ರೆಯ ಪರೀಕ್ಷೆಯಾಗಿ ಬಣ್ಣಿಸಿದರು. ಭಾರತವು ಸರ್ವಾಧಿಕಾರದ ದಾರಿಯಲ್ಲಿ ಸಾಗಬೇಕೋ ಅಥವಾ ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗೆ ಮುಂದುವರಿಯಬೇಕೋ ಎಂಬುದನ್ನು ನಿರ್ಧರಿಸಿದ ಐತಿಹಾಸಿಕ ಹಂತ ಅದು ಎಂದು ಹೇಳಿದರು.

ಭಾರತೀಯ ಸಂವಿಧಾನದ ಮೌಲ್ಯಗಳು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾಗಿ ಸಂಬಂಧ ಹೊಂದಿವೆ ಎಂದು ಹೇಳಿದ ಅಂಬೇಕರ್, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತತ್ವಗಳು ಭಾರತೀಯ ಜೀವನದರ್ಶನದ ಅವಿಭಾಜ್ಯ ಅಂಗಗಳಾಗಿವೆ ಎಂದರು. ಪ್ರಜಾಪ್ರಭುತ್ವವನ್ನು ಕೇವಲ ಕಾನೂನುಗಳ ಮೂಲಕವಲ್ಲ, ಸಾಂಸ್ಕೃತಿಕ ಜಾಗೃತಿ ಮತ್ತು ಸಾಮಾಜಿಕ ಮೌಲ್ಯಗಳ ಮೂಲಕವೂ ರಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು.

ಪಂಡಿತ ದೀನದಯಾಳ ಉಪಾಧ್ಯಾಯರ ವಿಚಾರಗಳನ್ನು ಉಲ್ಲೇಖಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಜನಜಾಗೃತಿ ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ಹೇಳಿದರು. ಜಾಗೃತ ಸಮಾಜವೇ ವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತದೆ ಮತ್ತು ರಾಜಕೀಯದ ಸ್ವಭಾವವೂ ಸಮಾಜದ ಸ್ವಭಾವದಿಂದಲೇ ನಿರ್ಧಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರದ ಕಾರ್ಯವೈಖರಿಯನ್ನು ಶ್ಲಾಘಿಸಿದ ಅಂಬೇಕರ್, ಸಂಸ್ಥೆಯು ಸ್ಥಾಪನೆಯಾದ ದಿನದಿಂದಲೇ ಭಾರತೀಯ ಭಾಷೆಗಳು ಮತ್ತು ರಾಷ್ಟ್ರೀಯ ದೃಷ್ಟಿಕೋನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದು, ಪ್ರಸ್ತುತ 15ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸುದ್ದಿ ಸೇವೆ ಒದಗಿಸುತ್ತಿದೆ ಎಂದು ಹೇಳಿದರು.

ಮಾಹಿತಿ ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಇಂದಿನ ಯುಗದಲ್ಲಿ ಸತ್ಯ, ಸಮಾಜಹಿತ ಮತ್ತು ರಾಷ್ಟ್ರಹಿತವನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ಸುದ್ದಿ ಸಂಸ್ಥೆಗಳ ಪಾತ್ರ ಇನ್ನಷ್ಟು ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಸಂಘದ ಶತಮಾನೋತ್ಸವ ವರ್ಷದ ಅಂಗವಾಗಿ ನೀಡಲಾಗಿರುವ ‘ಪಂಚ ಪರಿವರ್ತನೆ’ ಕರೆಗೆ ಉಲ್ಲೇಖಿಸಿದ ಅವರು, ಸಾಮಾಜಿಕ ಸಾಮರಸ್ಯ, ಕುಟುಂಬ ವ್ಯವಸ್ಥೆಯ ಬಲವರ್ಧನೆ, ಪರಿಸರ ಸ್ನೇಹಿ ಜೀವನಶೈಲಿ, ಕರ್ತವ್ಯ ಪ್ರಜ್ಞೆ ಮತ್ತು ಸಮಾಜ ಜಾಗೃತಿಯನ್ನು ಪ್ರಜಾಪ್ರಭುತ್ವದ ಬಲವರ್ಧನೆಗೆ ಅಗತ್ಯ ಅಂಶಗಳೆಂದು ಹೇಳಿದರು.

ಭಾರತದ ಯುವಜನತೆ ಪ್ರಜಾಪ್ರಭುತ್ವ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಬದ್ಧತೆಯನ್ನು ಹೊಂದಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯುವಕರು ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇಂದಿಗೂ ಯುವಜನರಲ್ಲಿ ದೇಶವನ್ನು ಮುನ್ನಡೆಸುವ ಸಕಾರಾತ್ಮಕ ಶಕ್ತಿ ಗೋಚರಿಸುತ್ತಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ರಕ್ಷಣೆಯು ಕೇವಲ ರಾಜಕೀಯ ಪಕ್ಷಗಳ ಹೊಣೆಗಾರಿಕೆ ಅಲ್ಲ; ಸಮಾಜ, ಕುಟುಂಬ, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳೆಲ್ಲರ ಸಮೂಹ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಜೆಪಿ ಹೋರಾಟಗಾರರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಬಿಹಾರ ಚಳವಳಿ ಹಾಗೂ ತುರ್ತು ಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ಜೆಪಿ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಪ್ರಜಾಪ್ರಭುತ್ವದ ರಕ್ಷಣೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಶಾಲು, ಸ್ಮರಣಿಕೆ ಮತ್ತು ಸನ್ಮಾನ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಅವರ ಹೋರಾಟ ಮತ್ತು ತ್ಯಾಗ ಹೊಸ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಉಪಸ್ಥಿತರು ಅಭಿಪ್ರಾಯಪಟ್ಟರು.

‘ಯುಗವಾರ್ತಾ’ ಮತ್ತು ‘ನವೋತ್ಥಾನ’ ಪತ್ರಿಕೆಗಳ ಲೋಕಾರ್ಪಣೆ

ಕಾರ್ಯಕ್ರಮದ ವೇಳೆ ಬಿಹಾರ ಚಳವಳಿ ಮತ್ತು ತುರ್ತು ಪರಿಸ್ಥಿತಿಯನ್ನು ಆಧರಿಸಿದ ಪಾಕ್ಷಿಕ ಪತ್ರಿಕೆ ‘ಯುಗವಾರ್ತಾ’ ಹಾಗೂ ಮಾಸಿಕ ಪತ್ರಿಕೆ ‘ನವೋತ್ಥಾನ’ ಅನ್ನು ಲೋಕಾರ್ಪಣೆ ಮಾಡಲಾಯಿತು. ಈ ಪ್ರಕಟಣೆಗಳಲ್ಲಿ ತುರ್ತು ಪರಿಸ್ಥಿತಿಯ ಅವಧಿಯ ಘಟನೆಗಳು, ಪ್ರಜಾಪ್ರಭುತ್ವ ಉಳಿಸುವ ಹೋರಾಟ, ಬಿಹಾರ ಚಳವಳಿಯ ಪಾತ್ರ ಹಾಗೂ ಅದಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳ ಕೊಡುಗೆಗಳನ್ನು ವಿವರವಾಗಿ ದಾಖಲಿಸಲಾಗಿದೆ.

ಈ ಪತ್ರಿಕೆಗಳು ಕೇವಲ ಐತಿಹಾಸಿಕ ದಾಖಲೆಗಳಲ್ಲ, ಪ್ರಜಾಪ್ರಭುತ್ವದ ಅರಿವು ಮತ್ತು ಜಾಗೃತಿಗೆ ಪ್ರಮುಖ ಉಲ್ಲೇಖ ಗ್ರಂಥಗಳಾಗಿವೆ. ಹೊಸ ಪೀಳಿಗೆಗೆ ತುರ್ತು ಪರಿಸ್ಥಿತಿಯ ಅನುಭವಗಳು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ನಡೆದ ಹೋರಾಟಗಳ ಪರಿಚಯ ಮಾಡಿಕೊಡುವಲ್ಲಿ ಇವು ಮಹತ್ವದ ಪಾತ್ರ ವಹಿಸಲಿವೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande