
ಪಾಟ್ನಾ, 24 ಜೂನ್ (ಹಿ.ಸ.) :
ಆ್ಯಂಕರ್ : ಭಾರತೀಯ ಭಾಷಾ ಪತ್ರಿಕೋದ್ಯಮಕ್ಕೆ ಸಮರ್ಪಿತವಾಗಿರುವ ಹಿಂದುಸ್ಥಾನ್ ಸಮಾಚಾರ ಸುದ್ದಿ ಸಂಸ್ಥೆ ಇಂದು ದೇಶದ ಗಡಿಗಳನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನದೇ ಆದ ಗುರುತನ್ನು ಮೂಡಿಸಿದೆ ಎಂದು ಹಿಂದುಸ್ಥಾನ್ ಸಮಾಚಾರ ಸುದ್ದಿ ಸಂಸ್ಥೆ ಸಮೂಹದ ಅಧ್ಯಕ್ಷ ಅರವಿಂದ ಭಾಲಚಂದ್ರ ಮಾರ್ಡೀಕರ್ ಹೇಳಿದರು.
ಪಾಟ್ನಾದ ಮಿಠಾಪುರ ಇನ್ಸ್ಟಿಟ್ಯೂಷನಲ್ ಏರಿಯಾದಲ್ಲಿ ಹಿಂದುಸ್ಥಾನ್ ಸಮಾಚಾರ ಆಯೋಜಿಸಿದ್ದ “ತುರ್ತು ಪರಿಸ್ಥಿತಿಯ 50 ವರ್ಷಗಳು: ಬಿಹಾರ ಚಳವಳಿ ಮತ್ತು ತುರ್ತು ಪರಿಸ್ಥಿತಿ” ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ನೊಂದಿಗೆ ಹಿಂದುಸ್ಥಾನ್ ಸಮಾಚಾರ ಸಹಕಾರ ಒಪ್ಪಂದ ಮಾಡಿಕೊಂಡಿದ್ದು, ಇದರ ಮೂಲಕ ಭಾರತ ಮತ್ತು ರಷ್ಯಾ ನಡುವಿನ ಸುದ್ದಿಗಳು ಹಾಗೂ ಮಾಹಿತಿಗಳ ವಿನಿಮಯ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಇತರ ರಾಷ್ಟ್ರಗಳ ಪ್ರಮುಖ ಸುದ್ದಿ ಸಂಸ್ಥೆಗಳೊಂದಿಗೂ ಸಹಕಾರವನ್ನು ವಿಸ್ತರಿಸುವ ಯೋಜನೆ ಇದೆ ಎಂದರು.
ಪ್ರಸ್ತುತ ಹಿಂದುಸ್ಥಾನ್ ಸಮಾಚಾರ 15 ಭಾರತೀಯ ಭಾಷೆಗಳಲ್ಲಿ ಸುದ್ದಿ ಸೇವೆಗಳನ್ನು ಒದಗಿಸುತ್ತಿದ್ದು, ದೇಶದ ಅನೇಕ ಪತ್ರಿಕೆಗಳು, ಡಿಜಿಟಲ್ ಮಾಧ್ಯಮಗಳು ಹಾಗೂ ಪ್ರಸಾರ ಭಾರತಿ ಸೇರಿದಂತೆ ಹಲವು ಸಂಸ್ಥೆಗಳು ಇದರ ಸೇವೆಗಳನ್ನು ಬಳಸುತ್ತಿವೆ ಎಂದು ಹೇಳಿದರು.
ಮಾತೃಭಾಷೆಯಲ್ಲಿ ಸುದ್ದಿಯ ಕನಸಿನಿಂದ ಆರಂಭ
1948ರಲ್ಲಿ ದಾದಾಸಾಹೇಬ್ ಆಪ್ಟೆ ಅವರು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅವರ ಮಾತೃಭಾಷೆಯಲ್ಲಿ ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಯನ್ನು ತಲುಪಿಸುವ ಉದ್ದೇಶದಿಂದ ಹಿಂದುಸ್ಥಾನ್ ಸಮಾಚಾರ ಸುದ್ದಿ ಸಂಸ್ಥೆಯನ್ನು ಸ್ಥಾಪಿಸಿದರು ಎಂದು ಮಾರ್ಡೀಕರ್ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಪ್ರೇರಣೆಯಿಂದ ಮುಂಬೈನಲ್ಲಿ ಸಂಸ್ಥೆಯ ಕಾರ್ಯಾರಂಭವಾಯಿತು. ನಂತರ ಇದನ್ನು ಸಹಕಾರ ಸಂಸ್ಥೆಯ ರೂಪಕ್ಕೆ ಪರಿವರ್ತಿಸಲಾಯಿತು. ಬಹುಭಾಷಾ ಪತ್ರಿಕೋದ್ಯಮದ ಪರಿಕಲ್ಪನೆಯೊಂದಿಗೆ ಆರಂಭವಾದ ಸಂಸ್ಥೆ ಇಂದಿಗೂ ಅದೇ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸತ್ಯ ಮತ್ತು ವಾಸ್ತವಾಂಶಗಳಿಗೆ ಆದ್ಯತೆ
ಹಿಂದುಸ್ಥಾನ್ ಸಮಾಚಾರ ಯಾವಾಗಲೂ ಸತ್ಯ ಮತ್ತು ವಾಸ್ತವಾಂಶಗಳಿಗೆ ಆದ್ಯತೆ ನೀಡಿದೆ. 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿಯೂ ಸಂಸ್ಥೆ ನೈಜ ಪರಿಸ್ಥಿತಿಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿತ್ತು ಎಂದು ಮಾರ್ಡೀಕರ್ ಸ್ಮರಿಸಿದರು.
ಭಾರತೀಯ ಭಾಷೆಗಳಲ್ಲಿ ಸುದ್ದಿ ಪ್ರಸಾರವನ್ನು ವೇಗಗೊಳಿಸಲು ದೇವನಾಗರಿ ಟೆಲಿಪ್ರಿಂಟರ್ನಂತಹ ಐತಿಹಾಸಿಕ ಪ್ರಯತ್ನಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದರು.
ತುರ್ತು ಪರಿಸ್ಥಿತಿಯ ವೇಳೆ ಭಾರೀ ಒತ್ತಡ
1975ರಲ್ಲಿ ತುರ್ತು ಪರಿಸ್ಥಿತಿ ಜಾರಿಯಾದ ಸಂದರ್ಭದಲ್ಲಿ ಹಿಂದುಸ್ಥಾನ್ ಸಮಾಚಾರ ಸುದ್ದಿ ಸಂಸ್ಥೆಯ ಮೇಲೆ ಭಾರೀ ಸರ್ಕಾರಿ ಒತ್ತಡ ಹೇರಲಾಯಿತು. ಸಂಸ್ಥೆಯನ್ನು ದುರ್ಬಲಗೊಳಿಸಿ ಮುಚ್ಚಿಸುವ ಪ್ರಯತ್ನಗಳು ನಡೆದವು. ಹಲವು ನಿರ್ಬಂಧಗಳು ಮತ್ತು ಸಂಕಷ್ಟಗಳ ನಡುವೆಯೇ 1983ರಲ್ಲಿ ಸಂಸ್ಥೆಯ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಯಿತು ಎಂದು ಅವರು ತಿಳಿಸಿದರು.
ಆದರೆ ಸಂಸ್ಥೆಯ ಅಸ್ತಿತ್ವ ಸಂಪೂರ್ಣವಾಗಿ ಕೊನೆಗೊಂಡಿರಲಿಲ್ಲ. ದೆಹಲಿ ಹೈಕೋರ್ಟ್ನಲ್ಲಿ ನಡೆದ ಕಾನೂನು ಹೋರಾಟದ ಬಳಿಕ 1998ರಲ್ಲಿ ಬಂದ ತೀರ್ಪು ಹಿಂದುಸ್ಥಾನ್ ಸಮಾಚಾರ ಸುದ್ದಿ ಸಂಸ್ಥೆಗೆ ಹೊಸ ಜೀವ ತುಂಬಿತು. ನಂತರ 2000ರಲ್ಲಿ ಸಂಸ್ಥೆಯ ಪುನರುಜ್ಜೀವನ ನಡೆಯಿತು ಎಂದು ಹೇಳಿದರು.
ಆರ್.ಕೆ. ಸಿನ್ಹಾ ನೇತೃತ್ವದಲ್ಲಿ ಹೊಸ ಚೈತನ್ಯ
2016ರಲ್ಲಿ ಆರ್.ಕೆ. ಸಿನ್ಹಾ ಅವರ ನೇತೃತ್ವದಲ್ಲಿ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ತಿರುವಾಗಿತ್ತು. ಅವರ ಪ್ರಯತ್ನಗಳಿಂದ ಸಂಸ್ಥೆಗೆ ಹೊಸ ಶಕ್ತಿ ದೊರೆಯಿತು ಮತ್ತು ಅದರ ಅಸ್ತಿತ್ವ ಮತ್ತಷ್ಟು ಬಲಗೊಂಡಿತು ಎಂದು ಮಾರ್ಡೀಕರ್ ಹೇಳಿದರು.
ತಂತ್ರಜ್ಞಾನದಲ್ಲಿ ಮುನ್ನಡೆ
ಹಿಂದುಸ್ಥಾನ್ ಸಮಾಚಾರ ಸುದ್ದಿ ಸಂಸ್ಥೆ ಇದೀಗ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ವೇಗವಾಗಿ ಬೆಳೆಯುತ್ತಿದೆ. ವರದಿಗಾರರಿಗಾಗಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದ್ದು, ಸಂಪೂರ್ಣ ಸುದ್ದಿ ಸಂಸ್ಕರಣಾ ವ್ಯವಸ್ಥೆ ಕ್ಲೌಡ್ ಆಧಾರಿತವಾಗಿದೆ ಎಂದು ಅವರು ಹೇಳಿದರು.
ಕೃತಕ ಬುದ್ಧಿಮತ್ತೆ, ಭಾಷಿಣಿ ಹಾಗೂ ಸತ್ಯಾಂಶ ಪರಿಶೀಲನಾ ತಂತ್ರಜ್ಞಾನಗಳ ಬಳಕೆಯ ಮೇಲೂ ಕಾರ್ಯ ನಡೆಯುತ್ತಿದೆ. 2022ರಲ್ಲಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದರೂ ಸುದ್ದಿ ಸೇವೆ ಒಂದು ಕ್ಷಣವೂ ಅಡಚಣೆಯಾಗಲಿಲ್ಲ ಎಂದು ಅವರು ತಿಳಿಸಿದರು.
80 ವರ್ಷಗಳ ಇತಿಹಾಸದಲ್ಲಿ ಮೊದಲ ಸ್ವಂತ ಕಚೇರಿ
ಸುಮಾರು 80 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಹಿಂದುಸ್ಥಾನ್ ಸಮಾಚಾರ ಸುದ್ದಿ ಸಂಸ್ಥೆ ದೆಹಲಿಯ ಪಂಚಕುಯಾನ್ ರಸ್ತೆಯಲ್ಲಿ ತನ್ನದೇ ಆದ ಶಾಶ್ವತ ಕಚೇರಿಯನ್ನು ಖರೀದಿಸಿದೆ. ಜೂನ್ 27ರಂದು ಹೊಸ ಕಚೇರಿಗೆ ಸ್ಥಳಾಂತರಗೊಳ್ಳಲಾಗುವುದು ಎಂದು ಮಾರ್ಡೀಕರ್ ತಿಳಿಸಿದರು.
ಅನೇಕ ಸವಾಲುಗಳು, ಹೋರಾಟಗಳು ಮತ್ತು ಏರುಪೇರುಗಳ ನಡುವೆಯೂ ಹಿಂದುಸ್ಥಾನ್ ಸಮಾಚಾರ ಸುದ್ದಿ ಸಂಸ್ಥೆ ತನ್ನ ಮೂಲ ಮೌಲ್ಯಗಳು ಮತ್ತು ಧ್ಯೇಯವನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ. ಸಂಸ್ಥೆ ತನ್ನದೇ ಆದ ನಿಲುವು ಹೊಂದಿರಬಹುದು, ಆದರೆ ಎಂದಿಗೂ ಪಕ್ಷಪಾತಿಯಾಗಿಲ್ಲ ಎಂದು ಅರವಿಂದ ಮಾರ್ಡಿಕರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.