1977ರ ಹೋರಾಟ ಪ್ರಜಾಪ್ರಭುತ್ವದ ಎರಡನೇ ಸ್ವಾತಂತ್ರ್ಯ ಚಳವಳಿಯಾಗಿತ್ತು : ರಾಮ ಬಹಾದುರ್ ರೈ
ಪಾಟ್ನಾ, 24 ಜೂನ್ (ಹಿ.ಸ.) : ಆ್ಯಂಕರ್ : 1942ರ ‘ಭಾರತ ಬಿಡಿ’ ಚಳವಳಿ ದೇಶದ ರಾಜಕೀಯ ಸ್ವಾತಂತ್ರ್ಯದ ನಿರ್ಣಾಯಕ ಅಧ್ಯಾಯವಾಗಿದ್ದರೆ, 1975ರಿಂದ 1977ರವರೆಗೆ ನಡೆದ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ವಿರೋಧಿ ಹೋರಾಟವು ಭಾರತೀಯ ಪ್ರಜಾಪ್ರಭುತ್ವದ ಎರಡನೇ ಸ್ವಾತಂತ್ರ್ಯ ಸಮರವಾಗಿತ್ತು ಎಂದು ಹಿರಿಯ ಪತ್
ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಬಹಾದುರ್ ರೈ


ಕಾರ್ಯಕ್ರಮದ ಉದ್ಘಾಟನಾ ಪೋಟೋ


ಪಾಟ್ನಾ, 24 ಜೂನ್ (ಹಿ.ಸ.) :

ಆ್ಯಂಕರ್ : 1942ರ ‘ಭಾರತ ಬಿಡಿ’ ಚಳವಳಿ ದೇಶದ ರಾಜಕೀಯ ಸ್ವಾತಂತ್ರ್ಯದ ನಿರ್ಣಾಯಕ ಅಧ್ಯಾಯವಾಗಿದ್ದರೆ, 1975ರಿಂದ 1977ರವರೆಗೆ ನಡೆದ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ವಿರೋಧಿ ಹೋರಾಟವು ಭಾರತೀಯ ಪ್ರಜಾಪ್ರಭುತ್ವದ ಎರಡನೇ ಸ್ವಾತಂತ್ರ್ಯ ಸಮರವಾಗಿತ್ತು ಎಂದು ಹಿರಿಯ ಪತ್ರಕರ್ತ, ಚಿಂತಕ ಹಾಗೂ ಪದ್ಮಶ್ರೀ ಪುರಸ್ಕೃತ ರಾಮಬಹಾದುರ್ ರೈ ಅಭಿಪ್ರಾಯಪಟ್ಟರು.

ಹಿಂದುಸ್ಥಾನ ಸಮಾಚಾರ ಸುದ್ದಿ ಸಂಸ್ಥೆ ಬಿಹಾರದ ಪಾಟ್ನಾದ ಮಿಠಾಪುರ ಇನ್ಸ್ಟಿಟ್ಯೂಷನಲ್ ಏರಿಯಾದಲ್ಲಿ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿಯ 50 ವರ್ಷಗಳು: ಬಿಹಾರ ಚಳವಳಿ ಮತ್ತು ತುರ್ತು ಪರಿಸ್ಥಿತಿ’ ವಿಷಯದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುತ್ತಾ ಅವರು ಈ ಮಾತುಗಳನ್ನು ಹೇಳಿದರು.

1947ರಲ್ಲಿ ದೇಶವು ವಿದೇಶಿ ಆಳ್ವಿಕೆಯಿಂದ ಮುಕ್ತಗೊಂಡಿದ್ದರೆ, 1977ರಲ್ಲಿ ಭಾರತೀಯ ಪ್ರಜಾಪ್ರಭುತ್ವವು ಸರ್ವಾಧಿಕಾರಿ ಪ್ರವೃತ್ತಿಗಳಿಂದ ಮುಕ್ತಿ ಪಡೆದಿತು. ಆದ್ದರಿಂದ ಈ ಎರಡೂ ಹೋರಾಟಗಳು ಭಾರತದ ಇತಿಹಾಸದಲ್ಲಿ ಸಮಾನ ಮಹತ್ವ ಹೊಂದಿವೆ ಎಂದು ಅವರು ಹೇಳಿದರು.

ಬಿಹಾರ ಚಳವಳಿಯ ದೊಡ್ಡ ಸಾಧನೆ ಜೆ.ಪಿ. ರಾಜಕೀಯಕ್ಕೆ ಮರಳಿದ್ದು

ಬಿಹಾರ ಚಳವಳಿಯ ಅತ್ಯಂತ ಮಹತ್ವದ ಸಾಧನೆ ಎಂದರೆ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದ್ದುದಾಗಿದೆ ಎಂದು ರಾಮಬಹಾದುರ್ ರೈ ಹೇಳಿದರು.

1955ರ ನಂತರ ಜಯಪ್ರಕಾಶ್ ನಾರಾಯಣ್ ಅವರು ಸಕ್ರಿಯ ರಾಜಕೀಯದಿಂದ ದೂರ ಉಳಿದು ಭೂದಾನ ಚಳವಳಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಆದರೆ 1974ರಲ್ಲಿ ಬಿಹಾರ ಚಳವಳಿಯ ನೇತೃತ್ವವನ್ನು ಸ್ವೀಕರಿಸಿದ ಬಳಿಕ ವಿದ್ಯಾರ್ಥಿ ಚಳವಳಿ ರಾಷ್ಟ್ರವ್ಯಾಪಿ ಜನಾಂದೋಲನವಾಗಿ ರೂಪುಗೊಂಡಿತು. ಇದರಿಂದ ಪ್ರಜಾಪ್ರಭುತ್ವ ರಕ್ಷಣೆಯ ಹೋರಾಟಕ್ಕೆ ಬಲಿಷ್ಠ ಅಡಿಪಾಯ ನಿರ್ಮಾಣವಾಯಿತು ಎಂದು ಅವರು ವಿವರಿಸಿದರು.

‘ಸಂಪೂರ್ಣ ಕ್ರಾಂತಿ’ಯೇ ಚಳವಳಿಯ ಮೂಲ ಉದ್ದೇಶ

ಬಿಹಾರ ಚಳವಳಿಯನ್ನು ಕೇವಲ ಭ್ರಷ್ಟಾಚಾರ ವಿರೋಧಿ ಹೋರಾಟವೆಂದು ನೋಡುವುದು ಅದರ ವ್ಯಾಪಕ ಸ್ವರೂಪವನ್ನು ಕುಗ್ಗಿಸುವಂತಾಗುತ್ತದೆ ಎಂದು ಅವರು ಹೇಳಿದರು.

ಈ ಚಳವಳಿಯ ಮೂಲ ಉದ್ದೇಶ ‘ಸಂಪೂರ್ಣ ಕ್ರಾಂತಿ’ ಮೂಲಕ ವ್ಯವಸ್ಥೆಯ ಪರಿವರ್ತನೆ ಸಾಧಿಸುವುದಾಗಿತ್ತು. ಜಯಪ್ರಕಾಶ್ ನಾರಾಯಣ್ ಅವರು ಕೇವಲ ಅಧಿಕಾರ ಬದಲಾವಣೆಯ ಪರವಾಗಿರಲಿಲ್ಲ; ಆಡಳಿತ ವ್ಯವಸ್ಥೆ, ರಾಜಕೀಯ ಸಂಸ್ಕೃತಿ ಹಾಗೂ ಸಾಮಾಜಿಕ ರಚನೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಬಯಸಿದ್ದರು ಎಂದು ಹೇಳಿದರು.

ನೆಹರೂಗೆ ಬರೆದ ಪತ್ರದಲ್ಲೇ ಸುಧಾರಣೆಯ ಅಗತ್ಯ ಪ್ರಸ್ತಾಪ

1959ರಲ್ಲೇ ಜಯಪ್ರಕಾಶ್ ನಾರಾಯಣ್ ಅವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಪತ್ರ ಬರೆದು ಸಂವಿಧಾನ ಹಾಗೂ ಆಡಳಿತ ವ್ಯವಸ್ಥೆಯ ಸಮಗ್ರ ಮರುಪರಿಶೀಲನೆಯ ಅಗತ್ಯವನ್ನು ಒತ್ತಿ ಹೇಳಿದ್ದರು ಎಂದು ರಾಮಬಹಾದುರ್ ರೈ ಸ್ಮರಿಸಿದರು.

ಇದರಿಂದ ದೇಶದ ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ರಚನಾತ್ಮಕ ಸುಧಾರಣೆ ತರಬೇಕೆಂಬ ಅವರ ದೂರದೃಷ್ಟಿ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ತುರ್ತು ಪರಿಸ್ಥಿತಿಯ ಹಿಂದಿನ ಕಾರಣಗಳ ವಿವರಣೆ

ದೆಹಲಿ ರಾಮಲೀಲಾ ಮೈದಾನದಲ್ಲಿ ಜಯಪ್ರಕಾಶ್ ನಾರಾಯಣ್ ಮಾಡಿದ ಭಾಷಣವೇ ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣ ಎಂಬ ಅಭಿಪ್ರಾಯ ಸಂಪೂರ್ಣವಾಗಿ ಸರಿಯಲ್ಲ ಎಂದು ರಾಮಬಹಾದುರ್ ರೈ ಹೇಳಿದರು.

1975ರ ಜೂನ್ 12ರಂದು ಅಲಹಾಬಾದ್ ಹೈಕೋರ್ಟ್ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಚುನಾವಣೆಯನ್ನು ಅಮಾನ್ಯವೆಂದು ಘೋಷಿಸಿದ ನಂತರ ಉಂಟಾದ ರಾಜಕೀಯ ಬಿಕ್ಕಟ್ಟೇ ತುರ್ತು ಪರಿಸ್ಥಿತಿಗೆ ದಾರಿ ಮಾಡಿಕೊಟ್ಟಿತು. ಅಧಿಕಾರದಲ್ಲಿ ಮುಂದುವರಿಯುವ ಇಚ್ಛೆ ಮತ್ತು ರಾಜಕೀಯ ಅಸ್ಥಿರತೆಯ ಭಯ ಪ್ರಮುಖ ಕಾರಣಗಳಾಗಿದ್ದವು ಎಂದು ಅವರು ತಿಳಿಸಿದರು.

ಶಾ ಆಯೋಗದ ವರದಿ ಅತ್ಯಂತ ಪ್ರಾಮಾಣಿಕ ದಾಖಲೆ

ತುರ್ತು ಪರಿಸ್ಥಿತಿಯ ಕಾರಣಗಳು ಮತ್ತು ಘಟನೆಗಳ ನಿಖರ ಅರಿವಿಗಾಗಿ ಶಾ ಆಯೋಗದ ವರದಿಯೇ ಅತ್ಯಂತ ವಿಶ್ವಾಸಾರ್ಹ ದಾಖಲೆ ಎಂದು ಅವರು ಹೇಳಿದರು.

ಆ ವರದಿ ಪ್ರಜಾಪ್ರಭುತ್ವ ಸಂಸ್ಥೆಗಳು, ನಾಗರಿಕ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಪ್ರಕ್ರಿಯೆಗಳ ಮೇಲೆ ಹೇಗೆ ಪರಿಣಾಮ ಬೀರಲಾಯಿತು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತದೆ ಎಂದು ತಿಳಿಸಿದರು.

ಜೆ.ಪಿ. ಮತ್ತು ಬಾಲಾಸಾಹೇಬ್ ದೇವರಸ್ ಪಾತ್ರ ಮಹತ್ವದ್ದು

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸಾವಿರಾರು ಪ್ರಜಾಪ್ರಭುತ್ವ ಪರ ಹೋರಾಟಗಾರರು ಕಾರಾಗೃಹವಾಸ ಅನುಭವಿಸಿ ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಗೆ ಹೋರಾಡಿದರು ಎಂದು ರಾಮಬಹಾದುರ್ ರೈ ಹೇಳಿದರು.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಸರಸಂಘಚಾಲಕ ಬಾಲಾಸಾಹೇಬ್ ದೇವರಸ್ ಅವರು ಈ ಹೋರಾಟಕ್ಕೆ ದಿಕ್ಕು ನೀಡುವಲ್ಲಿ ಮತ್ತು ಪ್ರಜಾಪ್ರಭುತ್ವ ಪರ ಶಕ್ತಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ಅಭಿಪ್ರಾಯಪಟ್ಟರು.

ಜನತೆಯ ಮತದಾನದಿಂದ ಪ್ರಜಾಪ್ರಭುತ್ವ ಪುನಃಸ್ಥಾಪನೆ

ತುರ್ತು ಪರಿಸ್ಥಿತಿ ವಿರೋಧಿ ಹೋರಾಟವು ಕೇವಲ ರಾಜಕೀಯ ಪಕ್ಷಗಳ ಮಟ್ಟಕ್ಕೆ ಸೀಮಿತವಾಗಿರಲಿಲ್ಲ. ವಿದ್ಯಾರ್ಥಿಗಳು, ಯುವಕರು, ಸಾಮಾಜಿಕ ಸಂಘಟನೆಗಳು ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದ್ದ ವಿವಿಧ ವರ್ಗಗಳ ಜನರು ಇದರಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದರು.

1977ರ ಜನವರಿಯಲ್ಲಿ ಚುನಾವಣೆಯ ಘೋಷಣೆಯಾದ ಬಳಿಕ ಜನತೆ ತಮ್ಮ ಮತದಾನದ ಮೂಲಕ ತುರ್ತು ಪರಿಸ್ಥಿತಿಯ ವಿರುದ್ಧ ಸ್ಪಷ್ಟ ತೀರ್ಪು ನೀಡಿದರು. ಚುನಾವಣಾ ಫಲಿತಾಂಶಗಳು ಪ್ರಜಾಪ್ರಭುತ್ವದ ಪುನಃಸ್ಥಾಪನೆಗೆ ದಾರಿ ಮಾಡಿಕೊಟ್ಟವು ಮತ್ತು ಭಾರತೀಯ ಸಮಾಜವು ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಗಾಢ ನಂಬಿಕೆ ಹೊಂದಿದೆ ಎಂಬುದನ್ನು ಸಾಬೀತುಪಡಿಸಿತು ಎಂದು ಹೇಳಿದರು.

ಪ್ರಜಾಪ್ರಭುತ್ವದ ಜಾಗೃತಿಗೆ ದೊಡ್ಡ ಸಾಕ್ಷಿ

1977ರಲ್ಲಿ ನಡೆದ ಪ್ರಜಾಪ್ರಭುತ್ವದ ಪುನಃಸ್ಥಾಪನೆ ಭಾರತೀಯ ಜನತೆಯ ಪ್ರಜಾಪ್ರಭುತ್ವ ಜಾಗೃತಿ, ಹೋರಾಟದ ಮನೋಭಾವ ಮತ್ತು ಸಂವಿಧಾನದ ಮೇಲಿನ ಬದ್ಧತೆಯ ಅತ್ಯಂತ ದೊಡ್ಡ ಸಾಕ್ಷಿಯಾಗಿದೆ ಎಂದು ರಾಮಬಹಾದುರ್ ರೈ ಹೇಳಿದರು.

ಆದ್ದರಿಂದಲೇ ತುರ್ತು ಪರಿಸ್ಥಿತಿ ವಿರೋಧಿ ಹೋರಾಟವನ್ನು ಭಾರತೀಯ ಪ್ರಜಾಪ್ರಭುತ್ವದ “ಎರಡನೇ ಸ್ವಾತಂತ್ರ್ಯ ಸಮರ” ಎಂದು ಇಂದಿಗೂ ಸ್ಮರಿಸಲಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande