
ಕೋಲಾರ, ಜೂನ್ ೨೩ (ಹಿ.ಸ) :
ಆ್ಯಂಕರ್ : ಕೋಲಾರ ತಾಲ್ಲೂಕಿನಲ್ಲಿ ಜೂನ್೨೮ರಂದು ಭಾನುವಾರ ಹಮ್ಮಿಕೊಳ್ಳಲಾದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ೦-೫ ವರ್ಷದೊಳಗಿನ ೪೦,೯೫೫ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಕೋಲಾರ ತಹಶೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಕೋಲಾರ ತಾಲ್ಲೂಕು ಕಛೇರಿಯಲ್ಲಿ ಈ ಕುರಿತು ಹಮ್ಮಿಕೊಳ್ಳಲಾದ ಸಭೆಯಲ್ಲಿ ತಿಳಿಸಿದರು. ಕೋಲಾರ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎ.ವಿ ನಾರಾಯಣಸ್ವಾಮಿ ಅವರು ಮಾತನಾಡಿ ಕೋಲಾರ ತಾಲ್ಲೂಕಿನಲ್ಲಿ ಒಟ್ಟು ೧೭೧ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ೬೮೪ ವ್ಯಾಕ್ಸಿನೇಟರ್ಗಳನ್ನು ನಿಯೋಜಿಸಲಾಗಿದೆ. ೩೬ ಮೇಲ್ವಿಚಾರಕರನ್ನು ನೇಮಿಸಿ, ೪೨ ವಾಹನಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಅಲ್ಲದೆ ಪಂಚಾಯತ್ ರಾಜ್, ಶಿಕ್ಷಣ, ನಗರಸಭೆ, ಬೆಸ್ಕಾಂ ಸೇರಿದಂತೆ ಇನ್ನಿತರ ಇಲಾಖೆಗಳು ಸಮನ್ವಯ ಸಾಧಿಸಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು. ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ರಾಜ್ಯಾದ್ಯಂತ ಜೂನ್ ೨೮ರ ಭಾನುವಾರ ಹಮ್ಮಿಕೊಳ್ಳಲಾಗಿದೆ. ೦-೫ ವರ್ಷದೊಳಗಿನ ನಗರ ಪ್ರದೇಶಗಳ ೧೮,೩೯೪ ಮಕ್ಕಳ, ಗ್ರಾಮಾಂತರ ಪ್ರದೇಶದ ೨೨,೫೬೧ ಮಕ್ಕಳು ಸೇರಿದಂತೆ ೪೦,೯೫೫ ಮಕ್ಕಳಿಗೆ ಲಸಿಕೆ ಹಾಕಲಾಗುವುದು.
ಕಟ್ಟಡ, ವಲಸೆ ಕಾರ್ಮಿಕರು ಹಾಗೂ ಇನ್ನಿತರ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಸಹ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜೂನ್ ೨೯ ರಿಂದ ಜುಲೈ ೧ ರವರೆಗೆ ಮನೆಮನೆಗೆ ತೆರಳಿ ವ್ಯಾಕ್ಸಿನೇಟರ್ಗಳ ಲಸಿಕೆ ಹಾಕಲಿದ್ದಾರೆ ಎಂದರು.
ಸಭೆಯಲ್ಲಿ ಕೋಲಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್. ಸತ್ಯನಾರಾಯಣಗೌಡ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್