ನಾಳೆ ನಾಫೆಡ್ ಡಿಜಿಟಲ್ ಹರಾಜು ಪೋರ್ಟಲ್ ಗೆ ಅಮಿತ್ ಶಾ ಚಾಲನೆ
ಭಾಗಿದಾರರಿ ಗೆ
ಅಮಿತ್ ಶಾ


ನವದೆಹಲಿ, 22 ಜೂನ್ (ಹಿ.ಸ.) :

ಆ್ಯಂಕರ್ : ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಮಂಗಳವಾರ ನವದೆಹಲಿಯ ಅಟಲ್ ಅಕ್ಷಯ ಊರ್ಜಾ ಭವನದಲ್ಲಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ಅಭಿವೃದ್ಧಿಪಡಿಸಿರುವ ಡಿಜಿಟಲ್ ಹರಾಜು ಪೋರ್ಟಲ್ ‘ನಾಫೆಕ್ಸ್’ ಅನ್ನು ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್, ನೆಫೆಡ್ ಅಧ್ಯಕ್ಷ ಜೇಠಾಭಾಯಿ ಅಹಿರ್, ವ್ಯವಸ್ಥಾಪಕ ನಿರ್ದೇಶಕ ದೀಪಕ್ ಅಗ್ರವಾಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಸಹಕಾರ ಸಚಿವಾಲಯದ ಮಾಹಿತಿಯ ಪ್ರಕಾರ, ರೈತರು ಮತ್ತು ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರೂಪಿಸಲಾದ ಹಲವು ಡಿಜಿಟಲ್ ಹಾಗೂ ಕಲ್ಯಾಣ ಯೋಜನೆಗಳಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗುತ್ತದೆ. ರೈತರ ಮಕ್ಕಳಿಗಾಗಿ ನೆಫೆಡ್–ಕಲ್ಯಾಣ ವಿದ್ಯಾರ್ಥಿವೇತನ ಯೋಜನೆ, ಬೇಳೆಕಾಳು ಮತ್ತು ಎಣ್ಣೆಬೀಜಗಳ ದಾಸ್ತಾನು ನಿರ್ವಹಣೆಗೆ ದೃಷ್ಟಿ ಪೋರ್ಟಲ್, ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಉದ್ಯಮ ಸಂಪನ್ಮೂಲ ನಿರ್ವಹಣಾ ಪೋರ್ಟಲ್, ಹಾಗೂ ನಾಫೆಕ್ಸ್ ಡಿಜಿಟಲ್ ಹರಾಜು ವೇದಿಕೆ ಪ್ರಮುಖ ಯೋಜನೆಗಳಾಗಿವೆ.

ಕಾರ್ಯಕ್ರಮದಲ್ಲಿ ನಾಫೆಕ್ಸ್ ಪೋರ್ಟಲ್ನಲ್ಲಿ ನೇರ ನೋಂದಣಿ ಪ್ರಾತ್ಯಕ್ಷಿಕೆ ನಡೆಸಲಾಗುವುದು. ಜೊತೆಗೆ ಡಿಜಿಟಲ್ ಹರಾಜು ಪ್ರಕ್ರಿಯೆಯ ಅಧಿಕೃತ ಆರಂಭಕ್ಕೂ ಚಾಲನೆ ನೀಡಲಾಗುತ್ತದೆ. ನೆಫೆಡ್ ಪ್ರಕಾರ, ಈ ಪೋರ್ಟಲ್ ಕೃಷಿ ಉತ್ಪನ್ನಗಳ ಹರಾಜು ವ್ಯವಸ್ಥೆಯಲ್ಲಿ ಪಾರದರ್ಶಕತೆ, ವೇಗ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಹರಾಜು ಪ್ರಕ್ರಿಯೆಯ ಸಂಪೂರ್ಣ ಡಿಜಿಟಲೀಕರಣದ ಮೂಲಕ ರೈತರು, ಸದಸ್ಯ ಸಹಕಾರಿ ಸಂಸ್ಥೆಗಳು ಹಾಗೂ ಇತರ ಭಾಗಿದಾರರಿಗೆ ಒಂದೇ ವೇದಿಕೆಯಲ್ಲಿ ಸೇವೆ ದೊರೆಯಲಿದ್ದು, ವ್ಯಾಪಾರ ವ್ಯವಹಾರಗಳು ಇನ್ನಷ್ಟು ಸುಲಭವಾಗಲಿವೆ.

ಇದೇ ಸಂದರ್ಭದಲ್ಲಿ ಅಮಿತ್ ಶಾ ಅವರು ನೆಫೆಡ್–ಕಲ್ಯಾಣ ವಿದ್ಯಾರ್ಥಿವೇತನ ಯೋಜನೆಯಡಿ ಆಯ್ಕೆಯಾದ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನದ ಚೆಕ್ಗಳನ್ನು ವಿತರಿಸಲಿದ್ದಾರೆ. ರೈತರ ಕುಟುಂಬಗಳ ಶಿಕ್ಷಣ ಮತ್ತು ಕಲ್ಯಾಣವನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮದ ಬಳಿಕ ಅಮಿತ್ ಶಾ ಅವರು ನೆಫೆಡ್ ನಿರ್ದೇಶಕ ಮಂಡಳಿಯ ಸದಸ್ಯರೊಂದಿಗೆ ಸಭೆ ನಡೆಸಲಿದ್ದು, ಸಂಸ್ಥೆಯ ಚಟುವಟಿಕೆಗಳು, ಸಾಧನೆಗಳು, ಹಿಂದಿನ ನಿರ್ದೇಶನಗಳ ಅನುಷ್ಠಾನ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚೆ ನಡೆಸಲಿದ್ದಾರೆ.

ದೇಶದಲ್ಲಿ ಕೃಷಿ ಮಾರುಕಟ್ಟೆ, ಕೃಷಿ ಉತ್ಪನ್ನಗಳ ಖರೀದಿ ಮತ್ತು ಸಹಕಾರಿ ಆಧಾರಿತ ಕೃಷಿ ವ್ಯಾಪಾರ ಕ್ಷೇತ್ರದಲ್ಲಿ ನೆಫೆಡ್ ಪ್ರಮುಖ ಪಾತ್ರ ವಹಿಸುತ್ತಿದೆ. ಹೊಸ ಡಿಜಿಟಲ್ ಹಾಗೂ ಕಲ್ಯಾಣ ಕಾರ್ಯಕ್ರಮಗಳು ಸಹಕಾರಿ ಸಂಸ್ಥೆಗಳನ್ನು ತಂತ್ರಜ್ಞಾನ ಮತ್ತು ಪಾರದರ್ಶಕತೆಯ ಮೂಲಕ ಇನ್ನಷ್ಟು ಬಲಪಡಿಸುವ ಜೊತೆಗೆ ರೈತರ ಆದಾಯ ಮತ್ತು ಅವಕಾಶಗಳನ್ನು ವೃದ್ಧಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande