
ಮುಂಬಯಿ, 22 ಜೂನ್ (ಹಿ.ಸ.) :
ಆ್ಯಂಕರ್ : ದೇಶದ ಜನಸಂಖ್ಯಾ ವಿನ್ಯಾಸದಲ್ಲಾಗುತ್ತಿರುವ ಬದಲಾವಣೆಗಳು ಹಾಗೂ ಹಿಂದೂ ಜನಸಂಖ್ಯೆಯ ಪ್ರಮಾಣದಲ್ಲಿ ಉಂಟಾಗುತ್ತಿರುವ ಕುಸಿತವನ್ನು ಆಧರಿಸಿದ ‘ಡೆಮೊಗ್ರಫಿ ಇಸ್ ಡೆಸ್ಟಿನಿ’ ಸಾಕ್ಷ್ಯಚಿತ್ರವನ್ನು 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಕೇಂದ್ರದಲ್ಲಿ ಭಾನುವಾರ ನಡೆದ ಪ್ರದರ್ಶನದಲ್ಲಿ ಈ ಸಾಕ್ಷ್ಯಚಿತ್ರವನ್ನು ಉತ್ಸವದ ರಾಷ್ಟ್ರೀಯ ಸ್ಪರ್ಧಾ ವಿಭಾಗದ ಸಾಕ್ಷ್ಯಚಿತ್ರ ವಿಭಾಗಕ್ಕೆ ಆಯ್ಕೆ ಮಾಡಲಾಗಿತ್ತು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಕಮಾಖ್ಯ ನಾರಾಯಣ ಸಿಂಗ್ ಮತ್ತು ಅಂಶುಮಾನ್ ಶೇಖರ್ ಈ ಚಿತ್ರವನ್ನು ನಿರ್ದೇಶಿಸಿದ್ದು, ರವೀಂದ್ರ ಸಂಘವಿ ನಿರ್ಮಿಸಿದ್ದಾರೆ.
ಸಾಕ್ಷ್ಯಚಿತ್ರವು ಭಾರತದ ಜನಸಂಖ್ಯಾ ಬೆಳವಣಿಗೆಯ ದೀರ್ಘಕಾಲೀನ ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ. ಐತಿಹಾಸಿಕ ಜನಗಣತಿ ಅಂಕಿ-ಅಂಶಗಳ ಆಧಾರದ ಮೇಲೆ ದೇಶದ ವಿವಿಧ ಧಾರ್ಮಿಕ ಸಮುದಾಯಗಳ ಜನಸಂಖ್ಯಾ ರಚನೆಯಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಚಿತ್ರದಲ್ಲಿ ವಿವರಿಸಲಾಗಿದೆ.
ವಿವಾಹ ಮತ್ತು ಕುಟುಂಬದ ಕುರಿತಾಗಿ ಬದಲಾಗುತ್ತಿರುವ ಮನೋಭಾವ, ಜನನ ಪ್ರಮಾಣದ ಕುಸಿತ, ವಲಸೆ ಹಾಗೂ ವಿವಿಧ ಸಮುದಾಯಗಳ ಜನಸಂಖ್ಯಾ ಪ್ರವೃತ್ತಿಗಳಂತಹ ವಿಷಯಗಳ ಕುರಿತು ಚಿತ್ರದಲ್ಲಿ ಚರ್ಚಿಸಲಾಗಿದೆ. ಈ ಬದಲಾವಣೆಗಳು ಮುಂದಿನ ದಿನಗಳಲ್ಲಿ ಚುನಾವಣಾ ರಾಜಕೀಯ, ಸಾರ್ವಜನಿಕ ನೀತಿಗಳು ಮತ್ತು ಸಾಂಸ್ಕೃತಿಕ ಗುರುತಿನ ಮೇಲೆ ಪರಿಣಾಮ ಬೀರಬಹುದೆಂದು ಚಿತ್ರ ನಿರ್ಮಾಪಕರು ಅಭಿಪ್ರಾಯಪಟ್ಟಿದ್ದಾರೆ.
ನಿರ್ದೇಶಕ ಕಮಾಖ್ಯ ನಾರಾಯಣ ಸಿಂಗ್ ಮಾತನಾಡಿ, “ಜನಸಂಖ್ಯಾ ಅಧ್ಯಯನವು ಕೇವಲ ಅಂಕಿ-ಅಂಶಗಳ ವಿಷಯವಲ್ಲ. ಅದು ಒಂದು ರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸ್ವರೂಪದ ಮೇಲೂ ಪ್ರಭಾವ ಬೀರುತ್ತದೆ. ಭಾರತದ ಜನಸಂಖ್ಯಾ ಭವಿಷ್ಯದ ಕುರಿತು ಗಂಭೀರ ಚರ್ಚೆಗೆ ಪ್ರೇರಣೆ ನೀಡುವುದು ಈ ಚಿತ್ರದ ಉದ್ದೇಶ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಆಷೀಷ್ ಶೆಲಾರ್ ಮಾತನಾಡಿ, “ಸಾಕ್ಷ್ಯಚಿತ್ರಗಳು ಮಹತ್ವದ ರಾಷ್ಟ್ರೀಯ ವಿಷಯಗಳನ್ನು ಸಮಾಜದ ಮುಂದೆ ತಂದು ಅರ್ಥಪೂರ್ಣ ಸಂವಾದಕ್ಕೆ ವೇದಿಕೆ ಕಲ್ಪಿಸುವ ಪರಿಣಾಮಕಾರಿ ಮಾಧ್ಯಮವಾಗಿವೆ” ಎಂದರು.
ಕೌಶಲ್ಯಾಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರು, “ಜನಸಂಖ್ಯಾ ಪ್ರವೃತ್ತಿಗಳು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ” ಎಂದು ಅಭಿಪ್ರಾಯಪಟ್ಟರು.
ಈ ಸಾಕ್ಷ್ಯಚಿತ್ರದಲ್ಲಿ ಪದ್ಮಶ್ರೀ ಡಾ. ಜಿತೇಂದ್ರ ಬಜಾಜ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಾಂತಿಶ್ರೀ ಧುಲೀಪುಡಿ ಪಂಡಿತ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ವಿಜಯಾ ಭಾರತಿ ಸಯಾನಿ ಹಾಗೂ ಲೇಖಕ ಮತ್ತು ಚಿಂತಕ ರಾಜೀವ್ ಮಲ್ಹೋತ್ರಾ ಸೇರಿದಂತೆ ಹಲವು ಗಣ್ಯರ ಅಭಿಪ್ರಾಯಗಳನ್ನು ಒಳಗೊಂಡಿದೆ.
ಚಿತ್ರ ಪ್ರದರ್ಶನದ ವೇಳೆ ಸಂಸ್ಕೃತಿ ಸಚಿವ ಆಷೀಷ್ ಶೆಲಾರ್, ಕೌಶಲ್ಯಾಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಹಾಗೂ ಹಿರಿಯ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.