
ಭೋಪಾಲ್, 22 ಜೂನ್ (ಹಿ.ಸ.) :
ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯ ಪ್ರದೇಶದ ಶ್ಯೋಪುರ್ ಜಿಲ್ಲೆಯಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸೋಮವಾರ ಭೇಟಿ ನೀಡಿ ಚೀತಾ ಸಂರಕ್ಷಣಾ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು. ಇದರೊಂದಿಗೆ ಅವರ ಐದು ದಿನಗಳ ಮಧ್ಯಪ್ರದೇಶ ಪ್ರವಾಸ ಮುಕ್ತಾಯಗೊಂಡಿದ್ದು, ಬಳಿಕ ಅವರು ಗ್ವಾಲಿಯರ್ನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.
ಭಾನುವಾರ ಸಂಜೆ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ್ದ ರಾಷ್ಟ್ರಪತಿ, ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದ್ದರು. ಸೋಮವಾರ ಬೆಳಗ್ಗೆ ಉದ್ಯಾನವನದಲ್ಲಿ ಸಂಚರಿಸಿ ‘ಚೀತಾ ಮಿತ್ರರು’ ಹಾಗೂ ಸಹರಿಯಾ ಬುಡಕಟ್ಟು ಸಮುದಾಯದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಚೀತಾ ಸಂರಕ್ಷಣಾ ಯೋಜನೆ ಯಶಸ್ವಿಗೊಳಿಸಲು ಅವರು ನೀಡಿರುವ ಕೊಡುಗೆಯನ್ನು ಶ್ಲಾಘಿಸಿದರು.
ರಾಷ್ಟ್ರಪತಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಚೀತಾ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕೇಂದ್ರಕ್ಕೆ ಭೇಟಿ ನೀಡಿ ಚೀತಾಗಳ ಮೇಲ್ವಿಚಾರಣೆ, ಚಲನವಲನಗಳ ನಿಗಾವಹಣೆ ಹಾಗೂ ಸಂರಕ್ಷಣಾ ಕ್ರಮಗಳ ಕುರಿತು ಮಾಹಿತಿ ಪಡೆದರು. ಚೀತಾ ಯೋಜನೆಯ ಪ್ರಗತಿಯನ್ನು ಬಿಂಬಿಸುವ ವಿಶೇಷ ಪ್ರದರ್ಶನವನ್ನೂ ವೀಕ್ಷಿಸಿದರು.
ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಪ್ರಸ್ತುತ ಭಾರತದಲ್ಲಿ ಒಟ್ಟು 52 ಚೀತಾಗಳಿದ್ದು, ಅವುಗಳಲ್ಲಿ 49 ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿವೆ. ಉಳಿದ ಮೂರು ಚೀತಾಗಳನ್ನು ಮಂದಸೌರ್ ಜಿಲ್ಲೆಯ ಗಾಂಧೀ ಸಾಗರ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿದೆ.
ಚೀತಾಗಳಿಗಾಗಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ರಾಷ್ಟ್ರಪತಿ, ಕಾಡಿನೊಳಗೆ ಪ್ರತಿ ಎರಡು ಕಿಲೋಮೀಟರ್ ಅಂತರದಲ್ಲಿ ನೀರಿನ ಕುಣಿಗಳನ್ನು ನಿರ್ಮಿಸಿ ಅಗತ್ಯವಿದ್ದಾಗ ನೀರು ತುಂಬುವ ವ್ಯವಸ್ಥೆ ಮಾಡಿರುವ ಬಗ್ಗೆ ಅಧಿಕಾರಿಗಳಿಂದ ವಿವರಗಳನ್ನು ಪಡೆದರು. ಬೋಟ್ಸ್ವಾನಾದಿಂದ ತರಲಾಗಿರುವ ಚೀತಾಗಳ ಬೆಳವಣಿಗೆ ಮತ್ತು ಹೊಂದಾಣಿಕೆ ಕುರಿತ ಮಾಹಿತಿಯನ್ನೂ ಅವರು ತಿಳಿದುಕೊಂಡರು.
ಗಮನಾರ್ಹವಾಗಿ, ಬೋಟ್ಸ್ವಾನಾ ಪ್ರವಾಸದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವೀಕರಿಸಿದ್ದ ಎಂಟು ಚೀತಾಗಳನ್ನು ಭಾರತಕ್ಕೆ ಕರೆತರಲಾಗಿದ್ದು, ಅವುಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಳಿಸಲಾಗಿದೆ. ಭಾರತದಲ್ಲಿ ಚೀತಾಗಳ ಪುನರ್ಸ್ಥಾಪನೆಗೆ ಕೈಗೊಂಡಿರುವ ಈ ಮಹತ್ವಾಕಾಂಕ್ಷಿ ಯೋಜನೆ ಈಗ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.