

ಬೆಂಗಳೂರು, 21 ಜೂನ್ (ಹಿ.ಸ.) :
ಆ್ಯಂಕರ್ : ಯೋಗವು ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ದಾರಿದೀಪವಾಗಿದ್ದು, ಅದನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗದ ಗ್ರ್ಯಾಂಡ್ ಸ್ಟೆಪ್ಸ್ನಲ್ಲಿ ರಾಜ್ಯ ಆಯುಷ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಪುರಾತನ ಪರಂಪರೆಯಾದ ಯೋಗವು ಮಾನವನ ಆರೋಗ್ಯ ಮತ್ತು ಸುಖ ಜೀವನಕ್ಕೆ ಮಾರ್ಗದರ್ಶನ ನೀಡಿದೆ. ಮನಸ್ಸು ಮತ್ತು ದೇಹದ ಏಕತೆಗೆ ಯೋಗ ಅತ್ಯಂತ ಮಹತ್ವದ್ದಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನಸಿಕ ಒತ್ತಡ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಅವುಗಳನ್ನು ನಿಯಂತ್ರಿಸಲು ಯೋಗ ಪರಿಣಾಮಕಾರಿ ಸಾಧನವಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ 12 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಯೋಗ ದಿನ ಘೋಷಣೆಯಾಗಿ ಇಂದು ವಿಶ್ವದಾದ್ಯಂತ ಯೋಗಕ್ಕೆ ವಿಶೇಷ ಮಾನ್ಯತೆ ದೊರೆತಿದೆ. ಯುವಜನರು ಪ್ರತಿದಿನ ಯೋಗಾಭ್ಯಾಸಕ್ಕೆ ಸಮಯ ಮೀಸಲಿಟ್ಟು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
‘ಉತ್ತಮ ಆರೋಗ್ಯಕ್ಕಾಗಿ ಯೋಗ’ ಎಂಬ ಸಂದೇಶದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದ್ದು, ಯೋಗವನ್ನು ಕೇವಲ ಒಂದು ದಿನದ ಕಾರ್ಯಕ್ರಮವಾಗಿ ನೋಡದೆ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು. ಯೋಗದ ಕುರಿತು ಜಾಗೃತಿ ಮೂಡಿಸಲು ಹಾಗೂ ಅದರ ಪ್ರಚಾರಕ್ಕೆ ಕರ್ನಾಟಕ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ರಾಜ್ಯಪಾಲರು ತಿಳಿಸಿದರು.
ಇನ್ನೂ ಮಂಡ್ಯದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿ ನೀಡುವ ಯೋಗವು ಪ್ರಾಚೀನ ಭಾರತದ ಶ್ರೇಷ್ಠ ಕೊಡುಗೆ. ವರ್ತಮಾನ ಜಗತ್ತಿನ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಇರುವ ಏಕೈಕ ಮಾರ್ಗ ಯೋಗ ಒಂದೇ ಆಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಹಾಗೂ ಅವರ ಅವಿರತ ಶ್ರಮದಿಂದ ಯೋಗಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ದೇಶ ವಿದೇಶಗಳಲ್ಲಿ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ವಿಶ್ವಸಂಸ್ಥೆಯು 2014 ಜೂನ್ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿದ್ದು, ಇದು ಭಾರತೀಯ ಪ್ರಾಚೀನ ಪರಂಪರೆಗೆ ದೊರೆತ ಮಹತ್ತರ ಜಾಗತಿಕ ಮನ್ನಣೆ ಎಂಬುದನ್ನು ನಾವು ಮರೆಯುವಂತಿಲ್ಲ.
ನಾವೆಲ್ಲರೂ ಯೋಗವನ್ನು ನಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳೋಣ. ಆರೋಗ್ಯಕರ ದೇಹ, ಶಾಂತ ಮನಸ್ಸು ಹೊಂದುವುದಕ್ಕೆ ಯೋಗವನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳಲು ದೃಢ ನಿರ್ಧಾರ ಮಾಡೋಣ ಎಂದು ಕುಮಾರಸ್ವಾಮಿ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.