
ನವದೆಹಲಿ, 21 ಜೂನ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ ಹೆಡ್ಗೇವಾರ್ ಅವರ ಪುಣ್ಯತಿಥಿಯ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ತಮ್ಮ ಸಂದೇಶದಲ್ಲಿ, ಡಾ. ಹೆಡ್ಗೇವಾರ್ ಅವರ ಜೀವನ ದೇಶಭಕ್ತಿ, ಸಂಘಟನೆ ಮತ್ತು ಸಮರ್ಪಣೆಯ ಆದರ್ಶಗಳಿಂದ ಕೂಡಿದ್ದು, ಭಾರತದ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ. ಸೇವೆ ಮತ್ತು ಮೌಲ್ಯಾಧಾರಿತ ಜೀವನದ ಮೂಲಕ ಅವರು ಬಲಿಷ್ಠ, ಸಂಘಟಿತ ಹಾಗೂ ಆತ್ಮವಿಶ್ವಾಸಯುತ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಎಂದು ಅವರು ಸ್ಮರಿಸಿದ್ದಾರೆ. ಅವರ ಚಿಂತನೆಗಳು ಮತ್ತು ಆದರ್ಶಗಳು ಇಂದಿಗೂ ರಾಷ್ಟ್ರೀಯ ಸೇವೆಯ ಹಾದಿಯಲ್ಲಿ ಸಾಗುತ್ತಿರುವ ಅಸಂಖ್ಯಾತ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿವೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಸ್ವಾತಂತ್ರ್ಯ ಪೂರ್ವದಲ್ಲೇ ಭವ್ಯ ಭಾರತದ ಕನಸು ಕಂಡು, ಆ ಕನಸಿನ ಸಾಕಾರಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಟ್ಟಿ ಬೆಳೆಸಿದ ದೂರದೃಷ್ಟಿಯ ಚಿಂತಕ, ಶ್ರೇಷ್ಠ ನಾಯಕ ಹಾಗೂ ಸಮಾಜ ಸುಧಾರಕರಾದ ಡಾ. ಹೆಡ್ಗೇವಾರ್ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ. ಅವರ ಜೀವನ, ತತ್ವಚಿಂತನೆಗಳು ಮತ್ತು ಆದರ್ಶಗಳು ರಾಷ್ಟ್ರ ನಿರ್ಮಾಣದ ಪಥದಲ್ಲಿ ಇಂದಿಗೂ ದಾರಿದೀಪವಾಗಿವೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸಂದೇಶದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸುವ ಮೂಲಕ ಡಾ. ಹೆಡ್ಗೇವಾರ್ ಅವರು “ರಾಷ್ಟ್ರ ಮೊದಲು” ಎಂಬ ಚಿಂತನೆ ಮತ್ತು ಸಾಂಸ್ಕೃತಿಕ ರಾಷ್ಟ್ರವಾದದ ಮೌಲ್ಯಗಳನ್ನು ಜನಮಾನಸಕ್ಕೆ ತಲುಪಿಸಿದರು ಎಂದು ಹೇಳಿದ್ದಾರೆ. ಸುರಕ್ಷಿತ, ಸಮೃದ್ಧ ಹಾಗೂ ವಿಶ್ವದರ್ಜೆಯ ಭಾರತ ನಿರ್ಮಾಣದ ದೂರದೃಷ್ಟಿಯನ್ನು ಅವರು ಹೊಂದಿದ್ದರು ಎಂದು ಅಮಿತ್ ಶಾ ಉಲ್ಲೇಖಿಸಿದ್ದಾರೆ.
ಅಸ್ಪೃಶ್ಯತೆ ರಹಿತ, ಆತ್ಮವಿಶ್ವಾಸಯುತ, ಸ್ವದೇಶಿ ಮನೋಭಾವದ ಹಾಗೂ ಸಂಘಟಿತ ಸಮಾಜವನ್ನು ಅವರು ಕಲ್ಪಿಸಿಕೊಂಡಿದ್ದರು. ಅವರ ಜೀವನ ಮಾತೃಭೂಮಿಯ ಮೇಲಿನ ಅಪಾರ ಪ್ರೀತಿ, ಶಿಸ್ತು ಹಾಗೂ ಸಮರ್ಪಣೆಯ ಅಕ್ಷಯ ಸ್ಫೂರ್ತಿಯ ಮೂಲವಾಗಿದೆ ಎಂದು ಅಮಿತ್ ಶಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.