ಅಡ್ಡಮತದಾನ ಮಾಡಿದವರಿಗೆ ಪ್ರಾಯಶ್ಚಿತ್ತ ಇಲ್ಲ : ವಿ. ಸೋಮಣ್ಣ ಕಿಡಿ
ಸಂಬಂಧಿಸಿದಂತೆ
ಸೋಮಣ್ಣ


ತುಮಕೂರು, 21 ಜೂನ್ (ಹಿ.ಸ.) :

ಆ್ಯಂಕರ್ : ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪ್ರಾಯಶ್ಚಿತ್ತವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷವು ತಾಯಿಯಂತಿದ್ದು, ಅದರ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಜನರೂ ಕ್ಷಮಿಸುವುದಿಲ್ಲ, ಪಕ್ಷವೂ ಕ್ಷಮಿಸುವುದಿಲ್ಲ ಎಂದು ಹೇಳಿದರು. ಅಡ್ಡಮತದಾನ ಮಾಡಿದವರು ಮಾಡಿದ ಕೆಲಸ ಪಾಪದ ಕೆಲಸವಾಗಿದ್ದು, ಇಂತಹ ಕೃತ್ಯ ಮಾಡಿದವರಿಗೆ ಮನೆಯಲ್ಲಿಯೂ ನೆಮ್ಮದಿ ಸಿಗುವುದಿಲ್ಲ ಎಂದು ಕಿಡಿಕಾರಿದರು.

ಮೈತ್ರಿಗೆ ಇದರಿಂದ ಯಾವುದೇ ಭಂಗವಾಗುವುದಿಲ್ಲ. ಆದರೆ ಶಾಸಕರು ಮಾಡಿರುವುದು ಅತ್ಯಂತ ಹೇಯ ಕೃತ್ಯ. ಜನಪ್ರತಿನಿಧಿಗಳಾಗಿ ಮುಂದುವರಿಯುವ ಬದಲು ಅವರು ಮರ್ಯಾದೆಯಿಂದ ರಾಜೀನಾಮೆ ನೀಡಿ ಮನೆಗೆ ಹೋಗುವುದು ಉತ್ತಮ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಶಾಸಕನ ಕರ್ತವ್ಯ ಮತ್ತು ಪಕ್ಷದ ನಿಷ್ಠೆಯನ್ನು ಕಡೆಗಣಿಸಿ ಮಾಡಿದ ಈ ಪಾಪಕ್ಕೆ ಯಾವುದೇ ಪ್ರಾಯಶ್ಚಿತ್ತ ಇಲ್ಲ ಎಂದು ಅವರು ಹೇಳಿದರು.

ಅಡ್ಡಮತದಾನದ ಕುರಿತು ಸಂಪೂರ್ಣ ಮಾಹಿತಿ ನನಗೆ ಇಲ್ಲ. ನಾನು ಈ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ. ರಾಷ್ಟ್ರ ನಿರ್ಮಾಣದಲ್ಲಿ ಬಿಜೆಪಿಯ ಕೊಡುಗೆ ಅಪಾರವಾಗಿದ್ದು, ಅದನ್ನು ಇಡೀ ವಿಶ್ವ ಗುರುತಿಸಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಕೆಲ ಶಾಸಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಅಡ್ಡಮತದಾನ ಮಾಡಿರುವುದು ದುಃಖಕರ ಬೆಳವಣಿಗೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ವಿಶ್ವ ಮೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ನಿರ್ಧಾರ ಕೈಗೊಂಡಿರುವ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರು ದೊಡ್ಡವರು, ಯಾರು ಸಣ್ಣವರು ಎಂಬುದು ಮುಖ್ಯವಲ್ಲ. ಪಕ್ಷಕ್ಕೆ ದ್ರೋಹ ಮಾಡಿದವರ ನಡೆ ನಾಚಿಕೆಗೇಡಿತನದದ್ದು ಎಂದು ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande