
ಬೆಂಗಳೂರು, 21 ಜೂನ್ (ಹಿ.ಸ.) :
ಆ್ಯಂಕರ್ : ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಪಕ್ಷದೊಳಗಿನ ಅಸಮಾಧಾನ ಮತ್ತು ಅನುಮಾನಗಳನ್ನು ನಿವಾರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಶಾಸಕರಿಂದ ಆಣೆ–ಪ್ರಮಾಣ ಮಾಡಿಸುವ ಮೂಲಕ ಅಡ್ಡ ಮತದಾನ ಮಾಡಿದವರ ಪತ್ತೆಗೆ ಮುಂದಾಗಲು ಪಕ್ಷ ತೀರ್ಮಾನಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ನಾಲ್ಕು ಮತಗಳು ಅಡ್ಡ ಮತದಾನವಾಗಿವೆ ಎಂಬ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಇದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಬೇಸರ ಮೂಡಿದ್ದು, ಎಲ್ಲ 63 ಶಾಸಕರ ಮೇಲೂ ಅನುಮಾನ ವ್ಯಕ್ತವಾಗುವಂತಾಗಿದೆ ಎಂದು ಹೇಳಿದರು.
ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ ಅವರು, ತಾವು ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ದೆಹಲಿಗೆ ತೆರಳುತ್ತಿದ್ದು, ಮುಂದಿನ ವಾರ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಬಗ್ಗೆ ಚರ್ಚಿಸಲಾಗುವುದು ಎಂದರು. ಪಕ್ಷಕ್ಕೆ ದ್ರೋಹ ಮಾಡಿದವರು ಯಾರು ಎಂಬುದು ಶ್ರೀಕ್ಷೇತ್ರದಲ್ಲೇ ಗೊತ್ತಾಗಲಿ ಎಂದು ವಿಜಯೇಂದ್ರ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.