
ಕೋಲಾರ, ೧೮ ಜೂನ್ (ಹಿ.ಸ) :
ಆ್ಯಂಕರ್ : ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ವಹಿಸಬಾರದು ಎಂದು ಒತ್ತಾಯಿಸಿ ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಮುಂದೆ ಗುರುವಾರ ಸಿಪಿಐಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಪಿ.ಆರ್ ಸೂರ್ಯನಾರಾಯಣ ಮಾತನಾಡಿ ಕಳೆದ ಒಂಭತ್ತು ವರ್ಷಗಳಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿರುವ ಕೇಂದ್ರ ಸರಕಾರ ೨೦೨೩ರ ವಿದ್ಯುತ್ ಕಾಯ್ದೆಯ ಮೂಲಕ ಸರಕಾರದ ಹಿಡಿತವನ್ನು ಸಡಿಲಗೊಳಿಸಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ಬಳಕೆದಾರರ ಮೇಲೆ ದಬ್ಬಾಳಿಕ, ಮಾನಸಿಕ ಹಿಂಸೆ ಉಂಟಾಗಲಿದೆ. ೨೦೨೫ರ ಎಪ್ರಿಲ್ನಿಂದ ಎಲ್ಲಾ ಬಳಕೆದಾರರು ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸಬೇಕಾಗುತ್ತದೆ. ಪ್ರತಿ ಮೀಟರ್ಗೆ ೮೦೦೦ ರೂ.ನಂತೆ ದೇಶದ ೨೬ ಕೋಟಿ ವಿದ್ಯುತ್ ಗ್ರಾಹಕರ ಮೂಲಕ ೨,೦೮,೦೦೦೦ ಕೋಟಿ ರೂ. ಹಣ ಮೀಟರ್ ಅಳವಡಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಖಾಸಾ ದೋಸ್ತಿಗಳಾದ ಅದಾನಿ ಮತ್ತು ಟಾಟಾ ಕಂಪನಿಯ ಜೇಬು ತುಂಬಿಸುವ ಹುನ್ನಾರ ಇದಾಗಿದೆ. ಇದರಿಂದ ವಿದ್ಯುತ್ ದರ ಏರಿಕೆಯಾಗಲಿದೆ ಎಂದು ಆರೋಪಿಸಿದರು
ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸದಂತೆ ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಅದನ್ನು ಮೀರಿ ಭಾರತದಲ್ಲಿ ಈ ವ್ಯವಸ್ಥೆಗೆ ಮುಂದಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಈ ಬಗ್ಗೆ ಧ್ವನಿ ಎತ್ತುವುದು ಅತೀ ಅಗತ್ಯವಾಗಿದೆ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ಹೋರಾಟ ನಡೆಸಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಹಿಂಪಡೆಯಲಾಗಿತ್ತು. ಆದರೆ ರಾಜ್ಯ ಸರ್ಕಾರಗಳು ತಮ್ಮ ಇಚ್ಛೆಯಂತೆ ಇಂತಹ ನೀತಿಗಳನ್ನು ಜಾರಿಗೆ ತರಲು ಅವಕಾಶ ನೀಡಿರುವುದರಿಂದ ಕರ್ನಾಟಕದಲ್ಲೂ ಖಾಸಗೀಕರಣ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದು ದೂರಿದರು.
ವಿದ್ಯುತ್ ಖಾಸಗೀಕರಣದ ವಿರುದ್ಧ ಈ ಹಿಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು, ಇದೀಗ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಅದೇ ನೀತಿಯನ್ನು ಮುಂದುವರಿಸಲು ಮುಂದಾಗಿದೆ ರೈತರ ಕೃಷಿ ಪಂಪ್ಸೆಟ್ಗಳು, ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳ ಅಡಿಯಲ್ಲಿ ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ, ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ವಹಿಸುವ ಮೂಲಕ ಈ ಸೌಲಭ್ಯಗಳಿಗೆ ಕುತ್ತು ತರುವ ಹುನ್ನಾರ ನಡೆಸಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ರೈತರು, ಗ್ರಾಮೀಣ ಜನತೆ ಹಾಗೂ ಸಾಮಾನ್ಯ ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರ ವಿದ್ಯುತ್ ಖಾಸಗೀಕರಣದ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗಾಂಧಿನಗರ ನಾರಾಯಣಸ್ವಾಮಿ, ವಿ.ಗೀತಾ, ತಂಗರಾಜ್, ಮುಖಂಡರಾದ ಪಿ.ಶ್ರೀನಿವಾಸ್, ವಿಜಯಕೃಷ್ಣ, ಎಂ.ಎನ್ ಶ್ರೀರಾಮ್, ವಿ ನಾರಾಯಣರೆಡ್ಡಿ, ಹೆಚ್.ಬಿ ಕೃಷ್ಣಪ್ಪ, ಆಶಾ, ಭೀಮರಾಜ್, ಭದ್ರಿನಾಥ್, ಪಿಚ್ಚಕಣ್ಣು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್