
ಬೆಂಗಳೂರು, 18 ಜೂನ್ (ಹಿ.ಸ.) :
ಆ್ಯಂಕರ್ : ಸಮಾಜ ಸೇವೆಯ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಪಿಸಿಎ ಚಾರಿಟೇಬಲ್ ಟ್ರಸ್ಟ್, ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗಿಯ ಚಿಕಿತ್ಸಾ ವೆಚ್ಚ ಹಾಗೂ ಜೀವನೋಪಾಯಕ್ಕೆ ನೆರವಾಗಲು ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ಮಾನವೀಯತೆ ಮೆರೆದಿದೆ.
ಟ್ರಸ್ಟ್ ಮನವಿಗೆ ಸ್ಪಂದಿಸಿದ ದಾನಿಗಳ ಸಹಕಾರದಿಂದ ಒಟ್ಟು ₹45 ಸಾವಿರ ಮೊತ್ತವನ್ನು ಸಂಗ್ರಹಿಸಲಾಗಿದ್ದು, ಕ್ಯಾನ್ಸರ್ ರೋಗಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಡಿಎಸ್ಎಸ್ ಸೊಸೈಟಿಗೆ ಹಸ್ತಾಂತರಿಸಲಾಗಿದೆ.
ಈ ನಿಧಿ ಸಂಗ್ರಹ ಅಭಿಯಾನದಲ್ಲಿ ರೇಣುಕ ಹೆಗಡೆ ಅವರು ₹10 ಸಾವಿರ ದೇಣಿಗೆ ನೀಡಿದ್ದು, ವೆಂಕಟರಮಣ್ ಅವರು ಸ್ವಯಂಪ್ರೇರಿತವಾಗಿ ₹10,200 ಹಾಗೂ ಆಂಥೋನಿ ಮೇರಿ ಅವರು ₹4,200 ಸಂಗ್ರಹಿಸಿ ನೀಡುವ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ.
ಇದರ ಜೊತೆಗೆ ₹20 ರಿಂದ ₹1,000 ವರೆಗೆ ದೇಣಿಗೆ ನೀಡಿದ ಅನೇಕ ದಾನಿಗಳ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಸೈಮನ್, “ಪ್ರತಿಯೊಂದು ಕೊಡುಗೆಯೂ ಅಮೂಲ್ಯ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಅವರ ಬದುಕಿನಲ್ಲಿ ಆಶಾಕಿರಣ ಮೂಡಿಸಲು ಎಲ್ಲರ ಸಹಕಾರ ಕಾರಣವಾಗಿದೆ. ಸಮಾಜದಲ್ಲಿ ಮಾನವೀಯತೆ ಮತ್ತು ಪರಸ್ಪರ ಸಹಕಾರದ ಮನೋಭಾವ ಇನ್ನಷ್ಟು ಬಲವಾಗಬೇಕು” ಎಂದು ಅಭಿಪ್ರಾಯಪಟ್ಟರು.
ಸಮಾಜದ ನಾನಾ ವರ್ಗಗಳ ಜನರು ಕೈಜೋಡಿಸಿದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.