ಶಾಲಾ ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ
ಶಾಲಾ ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತುಕ್ರಮ
ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಾಗೇವಾಡಿ ಶಾಲಾ ಕಟ್ಟಡಗಳ ಸುರಕ್ಷಿತೆಯ ಬಗ್ಗೆ ಸಭೆ ನಡೆಸಿದರು.


ಕೋಲಾರ, ೧೮ ಜೂನ್ (ಹಿ.ಸ) :

ಆ್ಯಂಕರ್ : ಜಿಲ್ಲೆಯ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರೀತಿಯ ಬೇಜವಾಬ್ದಾರಿತನ ಅಥವಾ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಶಿಥಿಲಗೊಂಡಿರುವ ಕಟ್ಟಡಗಳ ಕುರಿತು ನಿರ್ಲಕ್ಷ್ಯ ವಹಿಸಿ ಮುಂದೆ ಯಾವುದೇ ಅನಾಹುತಗಳು ಸಂಭವಿಸಿದಲ್ಲಿ, ಸಂಬ0ಧಪಟ್ಟ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ತಕ್ಷಣವೇ ಅಮಾನತುಗೊಳಿಸಲಾಗುವುದು ಎಂದು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಪ್ರವೀಣ್ ಪಿ. ಬಾಗೇವಾಡಿ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಕೋಲಾರದಲ್ಲಿ ಶಾಲೆಯೊಂದರ ಮೇಲ್ಛಾವಣಿ ಬಿದ್ದು ಶಿಕ್ಷಕರೊಬ್ಬರು ಗಾಯಗೊಂಡ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಬಿಇಒಗಳು ಹಾಗೂ ಸಿಡಿಪಿಒಗಳ ತುರ್ತು ಪರಿಶೀಲನಾ ಸಭೆ ನಡೆಯಿತು.

ಜಿಲ್ಲೆಯಾದ್ಯಂತ ಶಿಥಿಲಾವಸ್ಥ ತಲುಪಿರುವ ಮತ್ತು ದುರಸ್ತಿ ಕಾಣಬೇಕಾಗಿರುವ ಶಾಲಾ ಕೊಠಡಿಗಳು ಹಾಗೂ ಅಂಗನವಾಡಿ ಕೇಂದ್ರಗಳ ನಿಖರವಾದ ವರದಿಯನ್ನು ಮುಂಬರುವ ಮೂರು ದಿನಗಳ ಒಳಗೆ ಡಿಡಿಪಿಐ ಮುಖಾಂತರ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸಿಇಒ ಗಡುವು ವಿಧಿಸಿದ್ದಾರೆ. ಅಪಾಯದ ಮುನ್ಸೂಚನೆ ಇರುವ ಕೊಠಡಿಗಳಿಂದ ಮಕ್ಕಳನ್ನು ತಕ್ಷಣವೇ ಬೇರೆ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ತಾಲೂಕುವಾರು ಪರಿಶೀಲನೆಯಲ್ಲಿ ಬಂಗಾರಪೇಟೆಯ ೬೩ ಕಟ್ಟಡಗಳು, ಕೆ.ಜಿ.ಎಫ್ನ ೨೪ ಕೊಠಡಿಗಳು ಸೇರಿದಂತೆ ಕೋಲಾರ, ಮಾಲೂರು, ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲೂಕುಗಳ ಬಿಇಒಗಳು ತಮ್ಮ ವ್ಯಾಪ್ತಿಯ ಮೈನರ್ ಮತ್ತು ಮೇಜರ್ ರಿಪೇರಿ ಇರುವ ಕಟ್ಟಡಗಳ ಪಟ್ಟಿಯನ್ನು ಸಭೆಗೆ ಒದಗಿಸಿದರು.

ಕಟ್ಟಡಗಳ ದುರಸ್ತಿ ಕಾರ್ಯಕ್ಕಾಗಿ ಲಭ್ಯವಿರುವ ಲಿಂಕ್ ಡಾಕ್ಯುಮೆಂಟ್ ಅನುದಾನದ ವಿವರಗಳನ್ನು ಸಿಇಒ ಪರಿಶೀಲಿಸಿದರು. ಸಾಮಾನ್ಯ ಕಟ್ಟಡಗಳ ದುರಸ್ತಿಗೆ ೧೪೩.೪೯ ಲಕ್ಷ ರೂ., ಎಸ್.ಸಿ ಬಿಡುಗಡೆ ಅಡಿ ೭೦.೨೧ ಲಕ್ಷ ರೂ. ಹಾಗೂ ಎಸ್.ಟಿ ಬಿಡುಗಡೆ ಅಡಿ ೨೮.೦೮ ಲಕ್ಷ ರೂ. ಅನುದಾನ ಲಭ್ಯವಿದ್ದು, ಇವುಗಳನ್ನು ಬಳಸಿಕೊಂಡು ಪಿಆರ್ಇಡಿ ಅಧಿಕಾರಿಗಳು ತಕ್ಷಣವೇ ದುರಸ್ತಿ ಕಾರ್ಯಗಳನ್ನು ಆರಂಭಿಸಬೇಕೆ0ದು ಆದೇಶಿಸಲಾಯಿತು.

ಅಲ್ಲದೆ ಶಿಥಿಲಾವ್ಯಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡಗಳನ್ನು ಸಹ ಗುರುತಿಸಿ ಇದನ್ನು ರಪೇರಿ ಅಥವಾ ಹೊಸ ಕಟ್ಟಡಗಳನ್ನು ಕಟ್ಟಿಸಲು ಗ್ರಾಮಪಂಚಾಯಿತಿ ಸಹಕಾರ ಪಡೆಯಬೇಕೆಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಡಿಪಿಓಗಳಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದರು.

ಜೊತೆಗೆ, ಪ್ರತಿ ಶಾಲೆಯಲ್ಲೂ ಜಲ ಜೀವನ್ ಮಿಷನ್ ಅಡಿಯಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು ಮತ್ತು ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಸ್ವಚ್ಛ ಶೌಚಾಲಯಗಳ ವ್ಯವಸ್ಥೆ ಇರಬೇಕು ಎಂದು ತಾಕೀತು ಮಾಡಿದರು. ಶಾಲಾ ಆವರಣಗಳಲ್ಲಿ ಔಷಧೀಯ ಸಸ್ಯಗಳನ್ನೊಳಗೊಂಡ 'ಧನ್ವಂತರಿ ವನ' ಅಭಿವೃದ್ಧಿಪಡಿಸಲು ಆದ್ಯತೆ ನೀಡುವಂತೆ ತಿಳಿಸಲಾಯಿತು.

ಜಿಲ್ಲೆಯ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಕೋಲಾರ ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ೧ನೇ ತರಗತಿಯ ದಾಖಲಾತಿ ಪ್ರಮಾಣದಲ್ಲಿ ಸುಮಾರು ೩೦% ರಷ್ಟು ಇಳಿಕೆಯಾಗಿರುವ ಬಗ್ಗೆ ಸಿಇಒ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ ಜಾರಿಗೆ ತರಲಾಗಿರುವ (ದ್ವಿಭಾಷಾ–ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ) ಬೋಧನೆಯ ಸೌಲಭ್ಯದ ಕುರಿತು ಕರಪತ್ರಗಳ ಮೂಲಕ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. ಶಿಕ್ಷಕರು ಮನೆ-ಮನೆಗೆ ಭೇಟಿ ನೀಡಿ ಪೋಷಕರನ್ನು ಮನವೊಲಿಸುವ ಮೂಲಕ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಜನಾಂದೋಲನ ರೂಪದಲ್ಲಿ ಕೆಲಸ ಮಾಡಬೇಕು ಎಂದು ಆದೇಶಿಸಿದರು.

ಜಿಲ್ಲೆಯಲ್ಲಿ ಕೈಗಾರಿಕಾ ವಲಯಗಳು ಹೆಚ್ಚಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಮೂರು ಗ್ರಾಮ ಪಂಚಾಯತಿಗಳಿಗೆ ಒಂದರAತೆ 'ಸಿಎಸ್ಆರ್ ಮಾದರಿ ಶಾಲೆ'ಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ದೊಡ್ಡ ದೊಡ್ಡ ಕಂಪನಿಗಳ ಸಹಯೋಗದೊಂದಿಗೆ ಶಾಲೆಗಳಿಗೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಬಿಇಒಗಳು ತಮ್ಮ ವ್ಯಾಪ್ತಿಯ ಅಗತ್ಯತೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಲಾಯಿತು.

ಅಂತಿಮವಾಗಿ, ವರದಿಯಾಗಿರುವ ಎಲ್ಲಾ ನ್ಯೂನತೆಗಳನ್ನು ಶೀಘ್ರವಾಗಿ ಪರಿಹರಿಸಿ ಮುಂಬರುವ ಒಂದು ವಾರದ ಒಳಗೆ ಅನುಪಾಲನಾ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಟಿ. ಕೆ. ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲಾ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande