ಬೆಲೆ ಕುಸಿತದಿಂದ ಕಂಗೆಟ್ಟಿರುವ ಮಾವು ಬೆಳೆಗಾರರ ನೆರವು ಕಲ್ಪಿಸಲು ಮನವಿ
ಬೆಲೆ ಕುಸಿತದಿಂದ ಕಂಗೆಟ್ಟಿರುವ ಮಾವು ಬೆಳೆಗಾರರ ನೆರವು ಕಲ್ಪಿಸಲು ಮನವಿ
ಡಾ.ವೈ.ಎ.ನಾರಾಯಣಸ್ವಾಮಿ.


ಕೋಲಾರ, ೧೮ ಜೂನ್ (ಹಿ.ಸ) :

ಆ್ಯಂಕರ್ : ಬೆಲೆ ಕುಸಿತದಿಂದ ಕಂಗೆಟ್ಟಿರುವ ಮಾವಿನ ರಾಜಧಾನಿ ಶ್ರೀನಿವಾಸಪುರ ಸೇರಿದಂತೆ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸುವಂತೆ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಅವರು, ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಸಂಬ0ಧ ಪತ್ರ ಬರೆದಿರುವ ಅವರು, ಕರ್ನಾಟಕವು ಗಮನಾರ್ಹವಾದ ಮಾವು ಬೆಳೆಯುವ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರ ಆದಾಯ ಮತ್ತು ಜೀವನೋಪಾಯವನ್ನು ಈ ಬೆಳೆ ಉಳಿಸಿಕೊಳ್ಳುತ್ತದೆ.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ತೋತಾಪುರಿ ಮಾವಿನ ಮಾದರಿ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಇದು ಬೆಳೆಗಾರರಿಗೆ ಗಂಭೀರ ತೊಂದರೆಯನ್ನು0ಟುಮಾಡಿದ್ದು, ರೈತರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ, ಮಾವಿನ ಉತ್ಪಾದನೆ ಕುಸಿದಿದೆ, ಮತ್ತು ಕಡಿಮೆ ಮಾರುಕಟ್ಟೆ ಬೆಲೆಗಳು ರೈತರಿಗೆ ಆರ್ಥಿಕ ನಷ್ಟವನ್ನುಂಟುಮಾಡಿವೆ ಮತ್ತು ಗಂಭೀರ ಸಂಕಷ್ಟಕ್ಕೆ ದೂಡಿವೆ. ತೋತಾಪುರಿ ಮಾವು ಬೆಳೆಗಾರರ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದ, ಹಿಂದಿನ ವರ್ಷದಂತೆ ಪ್ರಸಕ್ತ ವರ್ಷವೂ ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಅಡಿಯಲ್ಲಿ ಮಾವು ಬೆಳೆಗಾರರನ್ನು ಬೆಂಬಲಿಸುವ0ತೆ ಅವರು ಮನವಿ ಮಾಡಿದ್ದಾರೆ.

ಮಾರುಕಟ್ಟೆ ಬೆಲೆ ಕುಸಿತ ಮತ್ತು ಹೆಚ್ಚುತ್ತಿರುವ ಕೃಷಿ ವೆಚ್ಚಗಳಿಂದಾಗಿ ಮಾವು ಬೆಳೆಗಾರರು ಎದುರಿಸುತ್ತಿರುವ ಸವಾಲುಗಳನ್ನು ತಮ್ಮ ಪತ್ರದಲ್ಲಿ ಕೃಷಿ ಸಚಿವರ ಗಮನಕ್ಕೆ ತಂದಿರುವ ಡಾ.ವೈ.ಎ.ನಾರಾಯಣಸ್ವಾಮಿ, ರೈತರು ಮತ್ತು ತೋಟಗಾರಿಕೆ ವಲಯದ ಹಿತಾಸಕ್ತಿಯ ದೃಷ್ಟಿಯಿಂದ ಈ ವಿಷಯವನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ಕೋರಿದ್ದಾರೆ.

ಕರ್ನಾಟಕವು ಅತಿಹೆಚ್ಚು ಮಾವು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುಮಾರು ೧.೪೫ ಲಕ್ಷ ಹೆಕ್ಟೇರ್ಗಳಲ್ಲಿ ಮಾವು ಕೃಷಿ ಮಾಡಲಾಗುತ್ತಿದ್ದು, ಪ್ರಸಕ್ತ ಋತುವಿನಲ್ಲಿ ಸುಮಾರು ೧೦ ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗಿದೆ. ಆದರೆ, ಬೆಲೆ ಕುಸಿತ ಹಾಗೂ ಪ್ರತಿಕೂಲಕರ ಹವಾಮಾನದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಕೃಷಿ ಸಚಿವರ ಗಮನ ಸೆಳೆದಿದ್ದಾರೆ.

ಕೋಲಾರದಂತಹ ತೋಟಗಾರಿಕೆ ಅವಲಂಬಿತ ಜಿಲ್ಲೆಗಳಲ್ಲಿ ಇಂತಹ ನೆರವು ಅತಿಹೆಚ್ಚು ಪ್ರಯೋಜನಕಾರಿ ಆಗುತ್ತದೆ. ಅಲ್ಲಿ ಮಾವು ಕೃಷಿ ಗ್ರಾಮೀಣ ಆರ್ಥಿಕತೆಯ ಪ್ರಮುಖ ಅಂಶವಾಗಿದೆ ಎಂದಿರುವ ಡಾ.ವೈ.ಎ.ಎನ್.ಪಿಡಿಪಿಎಸ್ ಚೌಕಟ್ಟಿನ ಅಡಿಯಲ್ಲಿ ಮಾವು ಬೆಳೆಗಾರರಿಗೆ ಸೂಕ್ತ ಬೆಂಬಲವನ್ನು ನೀಡುವ ಬಗ್ಗೆ ಪರಿಗಣಿಸಲು ಮತ್ತು ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಲು ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande