
ವಿಜಯಪುರ, 08 ಮೇ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಮತ್ತೊಂದು ಮಹತ್ವದ ಯಶಸ್ಸನ್ನು ದಾಖಲಿಸಿದ್ದು, 30 ಸ್ವತ್ತಿನ ಪ್ರಕರಣಗಳನ್ನು ಭೇದಿಸಿ 28 ಜನ ಆರೋಪಿತರನ್ನು ದಸ್ತಗೀರ ಮಾಡಲಾಗಿದೆ. ಜೊತೆಗೆ ಸುಮಾರು ₹1,60,32,000/- (ಒಂದು ಕೋಟಿ ಅರವತ್ತು ಲಕ್ಷ ಮೂವತ್ತೆರಡು ಸಾವಿರ ರೂಪಾಯಿ) ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದರ ಜೊತೆಗೆ, ಕಳೆದ 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಜಾಬಂದಿ (ವಾರಂಟ್ ಹೊಂದಿರುವ) ಪ್ರಮುಖ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಮತ್ತು ತನಿಖಾ ಸಾಮರ್ಥ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವನ್ನು ಗುರುತಿಸಿ, ವಿಜಯಪುರ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳು ತಂಡದ ಕಾರ್ಯಕ್ಷಮತೆಯನ್ನು ಶ್ಲಾಘಿಸಿ, ಇಂತಹ ಕಾರ್ಯಗಳು ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಗೆ ಬಲ ನೀಡುತ್ತವೆ ಎಂದು ಹೇಳಿದರು.
ಅಧಿಕಾರಿಗಳು ಮಾತನಾಡುತ್ತಾ, “ಸ್ವತ್ತಿನ ಅಪರಾಧಗಳನ್ನು ತಡೆಗಟ್ಟುವುದು ಹಾಗೂ ದೀರ್ಘಕಾಲದಿಂದ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚುವುದು ಪೊಲೀಸ್ ಇಲಾಖೆಯ ಪ್ರಮುಖ ಆದ್ಯತೆ. ಈ ಸಾಧನೆ ತಂಡದ ಸಮರ್ಪಣೆ ಮತ್ತು ನಿಖರ ತನಿಖೆಯ ಫಲ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಠಾಣೆಗಳ ತನಿಖಾಧಿಕಾರಿಗಳು, ಸಿಬ್ಬಂದಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಶಂಸನಾ ಪತ್ರ ಪಡೆದ ಸಿಬ್ಬಂದಿಗೆ ಸಹೋದ್ಯೋಗಿಗಳಿಂದ ಅಭಿನಂದನೆಗಳ ಸುರಿಮಳೆಯಾಯಿತು.
ಈ ಯಶಸ್ಸಿನೊಂದಿಗೆ ವಿಜಯಪುರ ಪೊಲೀಸ್ ಇಲಾಖೆ ಮತ್ತೊಮ್ಮೆ ತನ್ನ ದಕ್ಷತೆ, ಶಿಸ್ತಿನ ಕಾರ್ಯಪಟುತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ನೀಡುವ ಬದ್ಧತೆಯನ್ನು ಸಾಬೀತುಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande