
ವಿಜಯಪುರ, 07 ಮೇ (ಹಿ.ಸ.)
ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೃದಯಭಾಗವಾದ ಗಾಂಧಿ ವೃತ್ತದ ಸಮೀಪ ಗುರುವಾರ ನಡೆದ ಭೀಕರ ರಸ್ತೆ ಅವಘಡದಲ್ಲಿ ಪುಟ್ಟ ಮಗುವೊಂದು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಕ್ಷಣಾರ್ಧದಲ್ಲಿ ನಡೆದ ಈ ದುರ್ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಾಗಿತ್ತು.
ಮಾಹಿತಿಯ ಪ್ರಕಾರ, ಬೈಕ್ ಸವಾರನೊಬ್ಬ ತನ್ನ ಪುಟ್ಟ ಮಗುವಿನೊಂದಿಗೆ ನಗರದ ಗಾಂಧಿ ವೃತ್ತದ ಬಳಿ ದಿನಸಿ ಸಾಮಾನು ಖರೀದಿಸಲು ಬಂದಿದ್ದಾನೆ. ಅಂಗಡಿಯ ಮುಂದೆ ಬೈಕ್ ನಿಲ್ಲಿಸಿ, ಮಗುವನ್ನು ಬೈಕ್ ಮೇಲೆಯೇ ಕೂರಿಸಿ ಆತ ಅಂಗಡಿಗೆ ತೆರಳಿದ್ದಾನೆ. ಈ ವೇಳೆ ರಸ್ತೆ ಮೂಲಕ ಟಾಟಾ ಏಸ್ ವಾಹನ ಸಾಗುತ್ತಿತ್ತು.
ಅದೇ ಸಂದರ್ಭದಲ್ಲಿ ಬೈಕ್ ಮೇಲಿದ್ದ ಮಗು ಏಕಾಏಕಿ ಆಯ ತಪ್ಪಿ ಕೆಳಗೆ ಬಿದ್ದಿದೆ. ದುರ್ಭಾಗ್ಯವಶಾತ್, ಕೆಳಗೆ ಬಿದ್ದ ಮಗು ಟಾಟಾ ಏಸ್ ವಾಹನದ ಹಿಂಬದಿ ಚಕ್ರದಡಿ ಸಿಲುಕಿದ್ದು, ತೀವ್ರವಾಗಿ ಗಾಯಗೊಂಡಿದೆ. ಸ್ಥಳದಲ್ಲಿದ್ದವರು ತಕ್ಷಣ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಗಂಭೀರ ಗಾಯಗಳ ಪರಿಣಾಮ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ತಕ್ಷಣ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಗುವಿನ ಪೋಷಕರ ಆಕ್ರಂದನ ಕಂಡು ಸ್ಥಳದಲ್ಲಿದ್ದವರ ಕಣ್ಣೀರು ತರಿಸಿತು. ನಗರದ ಮಧ್ಯಭಾಗದಲ್ಲೇ ಇಂತಹ ದುರ್ಘಟನೆ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅವಘಡದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ಘಟನೆ ಪುಟ್ಟ ಮಕ್ಕಳನ್ನು ವಾಹನಗಳ ಮೇಲೆ ಒಬ್ಬರೇ ಕೂರಿಸಿ ಬಿಡುವ ಅಪಾಯದ ಬಗ್ಗೆ ಮತ್ತೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ
---------------
ಹಿಂದೂಸ್ತಾನ್ ಸಮಾಚಾರ್ / jyothi deshpande