
ನವದೆಹಲಿ, 08 ಮೇ (ಹಿ.ಸ.) :
ಆ್ಯಂಕರ್ : ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಫ್ರಾನ್ಸ್ ನಡುವಿನ ತ್ರಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಹತ್ವದ ಉನ್ನತ ಮಟ್ಟದ ಸಭೆ ಅಬುಧಾಬಿಯಲ್ಲಿ ನಡೆಯಿತು.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಮೇ 7, 2026ರಂದು ನಡೆದ ಭಾರತ–ಯುಎಇ–ಫ್ರಾನ್ಸ್ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸಿದರು.
ಸಭೆಯಲ್ಲಿ ಯುಎಇಯ ಅಂತರರಾಷ್ಟ್ರೀಯ ಸಹಕಾರ ರಾಜ್ಯ ಸಚಿವರಾದ ರೀಮ್ ಅಲ್ ಹಶಿಮಿ ಹಾಗೂ ಫ್ರಾನ್ಸ್ನ ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳಾದ ಮಾರ್ಟಿನ್ ಬ್ರಿಯಾನ್ಸ್ ಉಪಸ್ಥಿತರಿದ್ದರು.
ಸಭೆಯಲ್ಲಿ ಕೃತಕ ಬುದ್ಧಿಮತ್ತೆ (AI), ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಹಕಾರ ವಿಸ್ತರಣೆ ಕುರಿತು ಚರ್ಚೆ ನಡೆಯಿತು. ತಂತ್ರಜ್ಞಾನ, ನವೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿ ಪರಸ್ಪರ ಸಹಭಾಗಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವನ್ನು ನಾಯಕರು ಒತ್ತಿಹೇಳಿದರು.
ಮೂರೂ ರಾಷ್ಟ್ರಗಳು ಭವಿಷ್ಯದಲ್ಲಿ ತ್ರಿಪಕ್ಷೀಯ ಸಹಯೋಗವನ್ನು ಹೆಚ್ಚು ರಚನಾತ್ಮಕ ಮತ್ತು ದೀರ್ಘಕಾಲಿಕ ರೀತಿಯಲ್ಲಿ ಮುಂದುವರಿಸಲು ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ.
ಈ ಕುರಿತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ–ಯುಎಇ–ಫ್ರಾನ್ಸ್ ತ್ರಿಪಕ್ಷೀಯ ವೇದಿಕೆ ಇತ್ತೀಚಿನ ವರ್ಷಗಳಲ್ಲಿ ಇಂಧನ, ಸಮುದ್ರ ಭದ್ರತೆ, ತಂತ್ರಜ್ಞಾನ ಮತ್ತು ಜಾಗತಿಕ ಸಂಪರ್ಕತೆಯಂತಹ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಮಹತ್ವದ ವೇದಿಕೆಯಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa