
ಗದಗ, 25 ಮೇ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು, ಶಿಕ್ಷಣದೊಂದಿಗೆ ಪ್ರಜ್ಞಾವಂತಿಕೆ ಹಾಗೂ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ ಎಂದು ಶಿರೋಳ ಜಗದ್ಗುರು ಯಚ್ಚರಸ್ವಾಮಿಗಳ ಸಂಸ್ಥಾನ ಗವಿಮಠದ ಶ್ರೀ ಅಭಿನವ ಯಚ್ಚರ ಮಹಾಸ್ವಾಮೀಜಿ ಹೇಳಿದರು.
ನಗರದ ಗಂಗಿಮಡಿ ಕ್ರಾಸ್ ಸಮೀಪದ ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಭವನದಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 8ನೇ ವರ್ಷದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಕಲಿಕಾ ಸಾಮಗ್ರಿಗಳ ವಿತರಣೆ, ವಿಶ್ವಕರ್ಮ ನೌಕರಶ್ರೀ – ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ದಂಪತಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ವಿದ್ಯಾಭ್ಯಾಸ ಬದುಕಿಗೆ ಆಧಾರವಾಗಿದ್ದರೆ, ಸಂಸ್ಕಾರ ಜೀವನವನ್ನು ಸುಂದರಗೊಳಿಸುವ ಶಕ್ತಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ವಿದ್ಯಾವಂತರಾಗುವುದರೊಂದಿಗೆ ಮೌಲ್ಯಯುತ ಬದುಕಿನತ್ತ ಹೆಜ್ಜೆ ಇಡಬೇಕು. ತಂದೆ-ತಾಯಿ, ಗುರುಹಿರಿಯರು ಹೇಳುವ ಒಳ್ಳೆಯ ವಿಚಾರಗಳನ್ನು ನಿರ್ಲಕ್ಷಿಸದೆ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಾಸ ಸಾಧ್ಯವಾಗುತ್ತದೆ. ಅಂಕಗಳು, ಪದವಿಗಳು ಮತ್ತು ಉದ್ಯೋಗ ಜೀವನಕ್ಕೆ ಬೆಂಬಲವಾದರೂ, ಮಾನವೀಯ ಮೌಲ್ಯಗಳು ಬದುಕಿಗೆ ಶಾಶ್ವತ ಗೌರವ ತಂದುಕೊಡುತ್ತವೆ ಎಂದು ತಿಳಿಸಿದರು.
ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ನೀಡುವುದು ಕುಟುಂಬದ ಜವಾಬ್ದಾರಿಯಾಗಿದೆ. ಸಮಾಜದ ಪ್ರತಿಯೊಬ್ಬ ಮಗು ಶಿಕ್ಷಣ ಪಡೆಯುವಂತಾದಾಗ ಮಾತ್ರ ಸುಶಿಕ್ಷಿತ ಹಾಗೂ ಸಂಘಟಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಮಾತನಾಡಿ, ಸಮಾಜದಲ್ಲಿ ಅನೇಕ ಸಂಘಟನೆಗಳಿದ್ದರೂ ಎಲ್ಲರೂ ಒಗ್ಗಟ್ಟಿನಿಂದ ಸಮಾಜದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಮಾಜ ಸಂಘಟನೆಯ ಅರಿವು ಮೂಡಿಸುವುದು ಅಗತ್ಯವಾಗಿದೆ. ಸಂಘವು ಎಂಟನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಈ ಬಾರಿ 140ಕ್ಕೂ ಹೆಚ್ಚು ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳು ಭಾಗವಹಿಸಿ ಸನ್ಮಾನ ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೇವಲ ಅಂಕಗಳ ಗುರಿ ಇಟ್ಟುಕೊಳ್ಳದೇ, ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗಳ ಗುರಿಯನ್ನು ಹೊಂದಬೇಕು. ಅದಕ್ಕಾಗಿ ಸಂಘವು ಅಗತ್ಯ ಸಹಕಾರ ನೀಡಲು ಸಿದ್ಧವಿದೆ. ಸಮಾಜದ ಎಲ್ಲರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದ್ದು, ಸಂಘದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಪಂಚಕಸಬುಗಳ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಕೆ.ಡಿ. ಬಡಿಗೇರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ತಪಸ್ಸಿನ ಮನೋಭಾವ ಅಗತ್ಯ ಎಂದು ಹೇಳಿದರು.
ಇಂದಿನ ಯುವಜನತೆ ಮೊಬೈಲ್ ಸೇರಿದಂತೆ ಅನಗತ್ಯ ಮನೋರಂಜನೆಗಳಿಂದ ದೂರವಿದ್ದು, ಶ್ರದ್ಧೆ ಮತ್ತು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ತಮ್ಮ ಬದುಕಿನ ಶಿಲ್ಪಿಗಳು ತಾವೇ ಆಗಿದ್ದು, ಉತ್ತಮ ಸಂಸ್ಕಾರ ಹಾಗೂ ಶಿಸ್ತು ಜೀವನದಲ್ಲಿ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೌನೇಶ ಕೆಂಭಾವಿ, ಧಾರವಾಡ ಜಿಲ್ಲಾ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕಾಳಪ್ಪ ವಿ. ಬಡಿಗೇರ, ರಾಯಚೂರು ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ಮನೋಹರ ವೈ. ಪತ್ತಾರ ಹಾಗೂ ಧಾರವಾಡ ಜಿಲ್ಲಾ ವಿಶ್ವಕರ್ಮ ನೌಕರರ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿಠ್ಠಲ ಜಿ. ಕಮ್ಮಾರ ಸೇರಿದಂತೆ ಹಲವು ಗಣ್ಯರು ಮಾತನಾಡಿ, ಸಮಾಜದ ಶಿಕ್ಷಣ, ಸಂಘಟನೆ ಮತ್ತು ಅಭಿವೃದ್ಧಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈರಪ್ಪ ಶ. ಪಂಚಾನನ, ಬಾಗಲಕೋಟೆ ತಾಲೂಕು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮ. ಅಗಲತಕಟ್ಟ, ರಾಯಚೂರು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಮು ಗಾಣದಾಳ, ಕೊಪ್ಪಳ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಎಚ್. ಬಡಿಗೇರ, ಕೊಪ್ಪಳ ಜಿಲ್ಲಾ ಸಂಘದ ನಿರ್ದೇಶಕರು ಹಾಗೂ ಸಮಾಜದ ಕಾರ್ಯಾಧ್ಯಕ್ಷ ರುದ್ರಪ್ಪ ಕೆ. ಬಡಿಗೇರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರಿಗೆ “ವಿಶ್ವಕರ್ಮ ಸಾಧಕಶ್ರೀ” ಹಾಗೂ “ವಿಶ್ವಕರ್ಮ ನೌಕರಶ್ರೀ” ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ನಿವೃತ್ತ ನೌಕರ ದಂಪತಿಗಳು ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಲಕ್ಷ್ಮೇಶ್ವರದ ಶ್ರೀಧರ ದೇ. ಬಡಿಗೇರ ಹಾಗೂ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿದರು. ಡಾ. ಗಿರೀಶ ಬಡಿಗೇರ ಸ್ವಾಗತಿಸಿದರು. ರಾಜಗೋಪಾಲ ಡಿ. ಕಡ್ಲಿಕೊಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಸುಮಂಗಲಾ ಪತ್ತಾರ ಕಾರ್ಯಕ್ರಮ ನಿರೂಪಿಸಿದರೆ, ಸಿ.ಎಂ. ಪತ್ತಾರ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ನೌಕರರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP