ನಗರಸಭೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ
ಗದಗ, 25 ಮೇ (ಹಿ.ಸ.) : ಆ್ಯಂಕರ್ : ಗದಗ–ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಬಿಜೆಪಿ ಸದಸ್ಯರ ವಾರ್ಡ್ಗಳಿಗೆ ಕಡಿಮೆ ಹಾಗೂ ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಬಿಜೆಪಿ ವಾರ್ಡ್ಗಳ ಜನತೆಗೆ ಅನ್ಯಾಯ ಮಾಡಲಾಗಿದ
ಫೋಟೋ


ಗದಗ, 25 ಮೇ (ಹಿ.ಸ.) :

ಆ್ಯಂಕರ್ : ಗದಗ–ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಬಿಜೆಪಿ ಸದಸ್ಯರ ವಾರ್ಡ್ಗಳಿಗೆ ಕಡಿಮೆ ಹಾಗೂ ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಬಿಜೆಪಿ ವಾರ್ಡ್ಗಳ ಜನತೆಗೆ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆರೋಪಿಸಿದರು.

ನಗರದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯ ಬಿಜೆಪಿ ಸದಸ್ಯರ ವಾರ್ಡ್ಗಳಿಗೆ ತಲಾ 50 ಲಕ್ಷ ರೂ. ಹಾಗೂ ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ತಲಾ 1 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಆರೋಪಿಸಿದರು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಕಾನೂನು ಸಚಿವ ಹಾಗೂ ಗದಗ ಶಾಸಕ ಡಾ. ಎಚ್.ಕೆ. ಪಾಟೀಲ ಅವರ ನಡೆ ಖಂಡನೀಯವಾಗಿದೆ ಎಂದು ಹೇಳಿದರು.

ಈ ಅನುದಾನದಡಿ ಕೈಗೆತ್ತಿಕೊಳ್ಳಲಾಗುತ್ತಿರುವ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ವಾರ್ಡ್ಗಳ ಬಿಜೆಪಿ ಸದಸ್ಯರನ್ನು ಆಹ್ವಾನಿಸದೆ ಅಗೌರವ ತೋರಲಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳನ್ನು ಕಡೆಗಣಿಸುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ನಡೆ ಎಂದು ಅವರು ಟೀಕಿಸಿದರು.

ಸಂವಿಧಾನದ ಆಶಯದಂತೆ ಜನಪ್ರತಿನಿಧಿಗಳಿಗೆ ಸಮಾನ ಗೌರವ ನೀಡಬೇಕಾಗಿರುವ ಸಂದರ್ಭದಲ್ಲಿ, ಕಾನೂನು ಸಚಿವರಾಗಿರುವವರೇ ಈ ರೀತಿಯ ವರ್ತನೆ ತೋರುವುದು ಸಮಂಜಸವಲ್ಲ ಎಂದು ರಾಜು ಕುರುಡಗಿ ಹೇಳಿದರು.

ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ನಗರಸಭೆಯ ಎಲ್ಲಾ 35 ವಾರ್ಡ್ಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕಾಗಿತ್ತು. ಆದರೆ ಗದಗ ಶಾಸಕರಾಗಿರುವ ಎಚ್.ಕೆ. ಪಾಟೀಲ ಅವರು ಪಕ್ಷಾಧಾರಿತ ತಾರತಮ್ಯ ಮಾಡಿರುವುದು ಆ ಭಾಗದ ಮತದಾರರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆರೋಪಿಸಿದರು.

ಶಾಸಕರಾಗಿ ಆಯ್ಕೆಯಾದ ನಂತರ ಅವರು ಒಂದು ಪಕ್ಷದ ಪ್ರತಿನಿಧಿಗಳಾಗಿಯೇ ಉಳಿಯದೆ, ಇಡೀ ವಿಧಾನ ಸಭಾ ಕ್ಷೇತ್ರದ ಪ್ರತಿನಿಧಿಗಳಾಗಿರುತ್ತಾರೆ ಎಂಬುದನ್ನು ಸಚಿವರು ಮನಗಾಣಬೇಕು ಎಂದು ಅವರು ಹೇಳಿದರು.

ಇನ್ನಾದರೂ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೆ, ಗದಗ–ಬೆಟಗೇರಿ ನಗರಸಭೆಯ ಎಲ್ಲಾ 35 ವಾರ್ಡ್ಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕು. ಜೊತೆಗೆ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಬಿಜೆಪಿ ಸದಸ್ಯರನ್ನು ಆಹ್ವಾನಿಸಬೇಕು. ಇಲ್ಲವಾದಲ್ಲಿ ಹೋರಾಟ ಹಾಗೂ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಈ ಸಂಬಂಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನೀಲ ಅಬ್ಬಿಗೇರಿ, ಚಂದ್ರು ತಡಸದ, ಮುತ್ತು ಮುಶಿಗೇರಿ, ಮಾಂತೇಶ ನಲವಡಿ, ಮಾಧುಸಾ ಮೇರವಾಡೆ, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಶಶಿಧರ ದಿಂಡೂರ, ಗದಗ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಶಂಕರ ಕಾಕಿ ಹಾಗೂ ಮುಖಂಡರಾದ ಮಹೇಶ್ ದಾಸರ, ಮಂಜುನಾಥ ಶಾಂತಗೇರಿ, ವಿಜಯಲಕ್ಷ್ಮೀ ಮಾನ್ವಿ, ರಮೇಶ್ ಸಜ್ಜಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande