
ಗದಗ, 25 ಮೇ (ಹಿ.ಸ.) :
ಆ್ಯಂಕರ್ : ಗದಗ ನಗರದ ಗಂಗಿಮಡಿ ಪ್ರದೇಶದಲ್ಲಿ ಅಧಿಕ ಮಳೆಯಿಂದ ತೊಂದರೆಗೀಡಾದ ಕುಟುಂಬಗಳಿಗೆ ಧೈರ್ಯ ತುಂಬಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು.
ಸ್ಥಳದಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ನೆರವು ಕಲ್ಪಿಸುವಂತೆ ಸೂಚಿಸಿದರು.
ಸಂತ್ರಸ್ತರೊಂದಿಗೆ ಮಾತನಾಡಿದ ಸಚಿವರು, ನಿಮ್ಮ ಪರಿಸ್ಥಿತಿಯನ್ನು ನಾನು ಖುದ್ದಾಗಿ ಅವಲೋಕನ ಮಾಡಿದ್ದೇನೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದರು.
ಗಂಗಿಮಡಿ ಪ್ರದೇಶದಲ್ಲಿ ಒಟ್ಟು 96 ಕುಟುಂಬಗಳು ತಗಡಿನ ಶೇಡ್ಗಳಲ್ಲಿ ಜೀವನ ಸಾಗಿಸುತ್ತಿದ್ದು, ಇದರಲ್ಲಿ 9 ಶೇಡ್ಗಳು ಸಂಪೂರ್ಣ ಕುಸಿದಿವೆ. ಈಗಾಗಲೇ ಜಿಲ್ಲಾಡಳಿತದಿಂದ 96 ಕುಟುಂಬಗಳಲ್ಲಿ 88 ಕುಟುಂಬಗಳಿಗೆ ತಲಾ 5 ಸಾವಿರ ರೂಪಾಯಿ ಸಹಾಯಧನ ವಿತರಿಸಲಾಗಿದ್ದು, ಉಳಿದ ಕುಟುಂಬಗಳಿಗೂ ಶೀಘ್ರವೇ ನೆರವು ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕೆಲವರು ಮನೆಗಳಿದ್ದರೂ ಇಲ್ಲಿ ಬಂದು ಶೇಡ್ ಹಾಕಿ ವಾಸಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಗಂಗಿಮಡಿಯಲ್ಲಿ ಮೊದಲ ಹಂತದಲ್ಲಿ 1000 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಿಜವಾದ ಅರ್ಹರಿಗೆ ಆದ್ಯತೆ ನೀಡಲಾಗುವುದು. ಸಂತ್ರಸ್ತರಿಗೆ ಮನೆ ನೀಡಲು ಕ್ರಮ ವಹಿಸಲಾಗುವುದು ಎಂದು ಎಂದು ಸಚಿವ ಎಚ್ ಕೆ ಪಾಟೀಲರು ಹೇಳಿದರು.
ಸಂಪೂರ್ಣ ಹಾನಿಗೊಳಗಾದ 9 ಮನೆಗಳ ಕುಟುಂಬಗಳು ಈಗಿನ 5 ಸಾವಿರ ರೂಪಾಯಿ ಸಹಾಯಧನ ಸಾಕಾಗುವುದಿಲ್ಲ ಎಂದು ಮನವಿ ಮಾಡಿದ್ದು, ಕನಿಷ್ಠ 20 ಸಾವಿರ ರೂಪಾಯಿ ನೆರವು ನೀಡುವಂತೆ ಬೇಡಿಕೆ ಇಟ್ಟಿವೆ. ಈ ಬಗ್ಗೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸದ್ಯ ಸಂತ್ರಸ್ತರು ಶಾಲಾ ಕೊಠಡಿಗಳಲ್ಲಿ ಆಶ್ರಯ ಪಡೆದಿದ್ದು, ಶಾಲೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಿರಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಗಂಗಿಮಡಿ ಸಂತ್ರಸ್ಥರಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ಉತ್ತಮ ಸೌಲಭ್ಯಗಳನ್ನು ಒದಗಿಸಿದ್ದಾರೆ. 96 ಶೇಡ್ಗಳಲ್ಲಿ ಯಾರಿಗೆ ಸ್ವಂತ ಮನೆ ಇದೆ, ಯಾರಿಗೆ ಇಲ್ಲ ಎಂಬುದನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಲಿದ್ದಾರೆ. ನಗರಸಭೆ ನಿಯಮಾವಳಿಗಳ ಅನ್ವಯ ದಾಖಲೆಗಳನ್ನು ಒದಗಿಸಿದವರಿಗೆ ಮನೆ ಮಂಜೂರು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸಚಿವ ಎಚ್ ಕೆ ಪಾಟೀಲರು ಹೇಳಿದರು.
ಈ ವೇಳೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿ, ಗಂಗಿಮಡಿ ಪ್ರದೇಶದ 96 ಕುಟುಂಬಗಳಲ್ಲಿ ಸುಮಾರು 60 ಶೇಕಡಾ ಕುಟುಂಬಗಳಿಗೆ ಮನೆ ಮಂಜೂರಾಗಿರುವುದಾಗಿ ತಿಳಿಸಿದರು. ಸಂತ್ರಸ್ತರಿಗೆ ಆಹಾರ, ಆರೋಗ್ಯ ಸೇವೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿದೆ ಎಂದರು.
ಸಾರ್ವಜನಿಕರು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡು, ಮಂಜೂರಾದ ಮನೆಗಳ ಮರುಸರ್ವೇ ನಡೆಸಬೇಕು, ಕೆಲವರು ಮಂಜೂರಾದ ಮನೆಗಳನ್ನು ಬಾಡಿಗೆಗೆ ನೀಡಿ ಶೇಡ್ಗಳಲ್ಲಿ ವಾಸಿಸುತ್ತಿದ್ದಾರೆ, ಮನೆ ಇಲ್ಲದವರು ತಾತ್ಕಾಲಿಕ ಶೇಡ್ಗಳಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಸರ್ಕಾರ ನೀಡಿರುವ ನೆರವು ಸಾಕಾಗುತ್ತಿಲ್ಲ, ಹೆಚ್ಚುವರಿ ಸಹಾಯಧನ ನೀಡಬೇಕು ಹಾಗೂ ಶಾಶ್ವತ ಸೂರು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಗಂಗಿಮಡಿಗೆ ಶಾಶ್ವತ ನೀರಿನ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕು, ಸೋಲಾರ್ ಲೈಟ್ಗಳನ್ನು ಅಳವಡಿಸಬೇಕು, ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಮನೆ ಮಂಜೂರಾಗುವವರೆಗೆ ಇಲ್ಲಿಯೇ ವಾಸಿಸಲು ಅವಕಾಶ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
“ನಮ್ಮ ಮನವಿಗೆ ಸ್ಪಂದಿಸಿ ಸಚಿವರು ಇಲ್ಲಿಗೆ ಬಂದು ಪರಿಸ್ಥಿತಿ ಪರಿಶೀಲಿಸಿದ್ದಾರೆ. ಸೂರು ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿರುವುದು ನಮಗೆ ಧೈರ್ಯ ತಂದಿದೆ” ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
ಇದೇ ವೇಳೆ ಸೇವಾ ತಂಡದ ನೆರವಿನಿಂದ ಶಸ್ತ್ರಚಿಕಿತ್ಸೆಗೊಂಡು ಗುಣಮುಖನಾದ ಸಾರ್ವಜನಿಕನೊಬ್ಬ ಸಚಿವರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ ಬಿ ಅಸೂಟಿ, ಜಿಲ್ಲಾ ಕೆ ಡಿ ಪಿ ಸಮಿತಿ ಸದಸ್ಯ ಎಸ್ ಎನ್ ಬಳ್ಳಾರಿ, ನೀಲವ್ವ ಬೋಳನವರ, ಸಿದ್ದು ಪಾಟೀಲ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಎಸಿ ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸ ಮೂರ್ತಿ, ಡಾ. ಎಸ್ ಎಸ್ ನೀಲಗುಂದ, ಆರ್ ಎಸ್ ಬುರಡಿ, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP