
ಬೆಂಗಳೂರು, 25 ಮೇ (ಹಿ.ಸ.) :
ಆ್ಯಂಕರ್ : ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ ಲಾಭ ಇಲ್ಲ, ಲಾಭ ಇರೋದು ರಾಜ್ಯಕ್ಕೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಮರ್ಥಿಸಿಕೊಂಡಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಟ್ ಕಡಿಮೆ ಮಾಡದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬೇಡ. ವ್ಯಾಟ್ ಕಡಿಮೆ ಮಾಡಿದರೆ ದೆಹಲಿ, ಗುಜರಾತ್ ದರಕ್ಕೆ ಪೆಟ್ರೋಲ್, ಡೀಸೆಲ್ ಸಿಗುತ್ತದೆ ಎಂದರು.
ತೈಲ ದರ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅಶೋಕ, .ಹಲವು ದೇಶಗಳು ತೈಲ ಬಳಕೆಯ ವಿಚಾರದಲ್ಲಿ ನಿರ್ಬಂಧ ವಿಧಿಸಿವೆ. ಆದರೆ ಪ್ರಧಾನಿ ಮೋದಿಯವರು ಯಾವುದೇ ನಿರ್ಬಂಧವಿದಿಸಿಲ್ಲ ಎಂದರು.
ಸಿದ್ದರಾಮಯ್ಯನವರು ರಾಜಕೀಯ ಕುತಂತ್ರ ಮಾಡುತ್ತಿದ್ದಾರೆ, ಗುಜರಾತ್, ಹರಿಯಾಣ, ದೆಹಲಿಯಲ್ಲಿ ಪೆಟ್ರೋಲ್ ದರ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ ವ್ಯಾಟ್ ಹೆಚ್ಚು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದು, ತೈಲದ ಮೇಲಿನ ವ್ಯಾಟ್ನಿಂದ ರಾಜ್ಯಕ್ಕೆ 6 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ, ರಾಜ್ಯ ಸರ್ಕಾರ ವ್ಯಾಟ್ ಇಳಿಸಲಿ ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ಕಾಕ್ರೋಚ್ ಪಕ್ಷಗಳು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿವೆ. ಇವೆರಡು ಪಕ್ಷಗಳು ಪಾಕಿಸ್ತಾನದ ಟೂಲ್ ಕಿಟ್, ದೇಶವಿಭಜನೆಯ ಟೂಲ್ ಕಿಟ್, ದೇಶದ್ರೋಹದ ಟೂಲ್ ಕಿಟ್ ಎಂದು ಕಿಡಿಕಾರಿದ್ದಾರೆ.
ತೈಲ ಬೆಲೆ ಏರಿಕೆ ಹಿನ್ನೆಲೆ ಮೇ 30ಕ್ಕೆ ಕಾಂಗ್ರೆಸ್ ಹೋರಾಟ ಹಮ್ಮಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ, ಅವರದ್ದು ಬೋಗಸ್ ಹೋರಾಟ, ಜನರಿಗೆ ಟೋಪಿ ಹಾಕುವ ಹೋರಾಟ ಎಂದಿದ್ದಾರೆ.
2028ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, 2028 ಕ್ಕೆ ತಾವೇ ಇರೋದಾಗಿ ಡಿಕೆಶಿ ಭವಿಷ್ಯ ನುಡಿದಿದ್ದಾರೆ. ಅವರಿಗೆ ಸ್ವತಃ ತನ್ನ ಭವಿಷ್ಯವನ್ನೇ ಹೇಳುವುದಕ್ಕಾಗಿಲ್ಲ. ಆಗ ಕಾಂಗ್ರೆಸ್ನಲ್ಲೇ ಇರುತ್ತಾರೋ ಬೇರೆ ಪಕ್ಷಕ್ಕೆ ಹೋಗುತ್ತಾರೋ ಯಾರಿಗೆ ಗೊತ್ತು ಎಂದು ವ್ಯಂಗವಾಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಿಗೆ ಬುಲಾವ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಒಬ್ಬರನ್ನೇ ಹೈಕಮಾಂಡ್ ಕರೆದಿರುವುದು. ಆದರೆ ಸಿದ್ದರಾಮಯ್ಯ ಒಬ್ಬರೇ ದೆಹಲಿಗೆ ಹೋಗುತ್ತಿಲ್ಲ. ಸಿಎಂ ತಮ್ಮ ಪಟಾಲಂ ಕರೆದುಕೊಂಡು ಹೋಗುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ಕೈಗೆ ಚಿಪ್ಪು ಕೊಡುತ್ತಾರೆ, 136 ಸೀಟ್ ಬರುವುದಾಗಿ ಭವಿಷ್ಯ ಹೇಳಿದ್ದೆ ಅಂತ ಪದೇ ಪದೇ ಹೇಳುತ್ತಿದ್ದಾರೆ. ಆದರೆ ಅವರಿಗೆ ತಮ್ಮ ಭವಿಷ್ಯವನ್ನೇ ಹೇಳುವುದಕ್ಕಾಗಿಲ್ಲ. ಕಾಂಗ್ರೆಸ್ನಲ್ಲಿ ಯಾರು ಸಿಎಂ ಅಂತ ಇನ್ನೂ ತೀರ್ಮಾನ ಆಗಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನ ಖಾಲಿ ಮಾಡುವಂತೆ ಕಾಣುತ್ತಿಲ್ಲ. ಡಿಕೆಶಿಗೆ ಖಾಲಿ ತಟ್ಟೆ ಕೊಡೋ ಥರ ಕಾಣುತ್ತಿದೆ. ಸಿದ್ದರಾಮಯ್ಯ ಅವರೇ ಸಿಎಂ ಅಂತ ತೀರ್ಮಾನ ಆದರೆ ಇನ್ನೂ 60 ಸಾವಿರ ಕೋಟಿಯಷ್ಟು ತೆರಿಗೆ ವಿಧಿಸಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ ಇದು ಸಿದ್ದರಾಮಯ್ಯ ಅವರ ಟ್ಯಾಕ್ಸ್ ಅವತಾರ ಎಂದು ಲೇವಡಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.