
ಗದಗ, 21 ಮೇ (ಹಿ.ಸ.) :
ಆ್ಯಂಕರ್ : ಕೌಟುಂಬಿಕ ಕಲಹ, ಅನುಮಾನ ಹಾಗೂ ವೈವಾಹಿಕ ವೈಮನಸ್ಸಿನ ಪರಿಣಾಮವಾಗಿ ಯುವಕನೊಬ್ಬ ತನ್ನದೇ ಪತ್ನಿಯ ಕೈಯಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ ನಾಗನೂರು ಗ್ರಾಮದಲ್ಲಿ ನಿನ್ನೆ ನಡೆದಿದೆ. ಪತಿಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ ಆರೋಪದಡಿ ಪತ್ನಿಯನ್ನು ಪೊಲೀಸರು ಬಂಧಿಸಿದ್ದು, ಘಟನೆ ಗ್ರಾಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮೃತ ವ್ಯಕ್ತಿಯನ್ನು ರಡ್ಡೇರ ನಾಗನೂರು ಗ್ರಾಮದ ನಿವಾಸಿ ವಿಶ್ವನಾಥ ಹಾದಿಮನಿ (28) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೃತನ ಪತ್ನಿ ಕವಿತಾ ಅವರನ್ನು ನರಗುಂದ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವಿಶ್ವನಾಥ ಹಾದಿಮನಿ ಅವರು 2022ರ ಫೆಬ್ರವರಿ ತಿಂಗಳಲ್ಲಿ ಬಾಗಲಕೋಟೆಯ ಲಕ್ಷ್ಮೀ ನಗರದ ನಿವಾಸಿಯಾದ ಕವಿತಾಳೊಂದಿಗೆ ವಿವಾಹವಾಗಿದ್ದರು. ಮದುವೆಯಾದ ನಂತರ ದಂಪತಿಗೆ ಒಂದು ಮಗು ಕೂಡ ಜನಿಸಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಮಗುವಿನ ವಿಚಾರ ಹಾಗೂ ಕುಟುಂಬದ ಕೆಲ ವೈಯಕ್ತಿಕ ಕಾರಣಗಳಿಂದಾಗಿ ಗಂಡ–ಹೆಂಡತಿ ನಡುವೆ ನಿರಂತರ ಗಲಾಟೆಗಳು ಉಂಟಾಗುತ್ತಿದ್ದು, ಈ ಹಿನ್ನೆಲೆ ಪತ್ನಿ ಕವಿತಾ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ವಿಶ್ವನಾಥ ಅವರ ಸಹೋದರಿಯ ಮದುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಇಬ್ಬರೂ ರಡ್ಡೇರ ನಾಗನೂರು ಗ್ರಾಮಕ್ಕೆ ಬಂದಿದ್ದರು. ಕುಟುಂಬದ ಸಂಭ್ರಮದ ನಡುವೆ ಹಳೆಯ ವೈಮನಸ್ಸು ಮತ್ತೆ ಮೇಲೇಳಿದ್ದು, ಘಟನೆ ನಡೆದ ರಾತ್ರಿ ದಂಪತಿಗಳು ಒಂದೇ ಕೊಠಡಿಯಲ್ಲಿ ಮಲಗಿದ್ದರು ಎಂದು ತಿಳಿದುಬಂದಿದೆ.
ಆ ರಾತ್ರಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಬಳಿಕ ಪತಿ ನಿದ್ದೆಗೆ ಜಾರಿದ ಸಮಯದಲ್ಲಿ ಪತ್ನಿ ಕವಿತಾ ಕಬ್ಬಿಣದ ರಾಡ್ನಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಯ ಪರಿಣಾಮ ವಿಶ್ವನಾಥ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆದ ಬಳಿಕ ಘಟನೆಯನ್ನು ಮರೆಮಾಚಲು ಆರೋಪಿತೆ ಪ್ರಯತ್ನಿಸಿದ್ದಾಳೆ ಎನ್ನಲಾಗಿದ್ದು, ಕೊಠಡಿಯೊಳಗಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾಳೆ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮುಂಜಾನೆ ಸಮಯವಾದರೂ ಪುತ್ರ ಎದ್ದಿರದ ಕಾರಣ ಅನುಮಾನಗೊಂಡ ತಾಯಿ ಕೊಠಡಿಗೆ ಹೋಗಿ ನೋಡಿದಾಗ ವಿಶ್ವನಾಥ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದರಿಂದ ಕುಟುಂಬಸ್ಥರಲ್ಲಿ ಆಘಾತ ಮೂಡಿದ್ದು, ತಕ್ಷಣ ನರಗುಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದರು. ಆರಂಭದಲ್ಲಿ “ನಾನು ಯಾವುದೇ ಕೊಲೆ ಮಾಡಿಲ್ಲ” ಎಂದು ಕವಿತಾ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಆದರೆ ಘಟನಾ ಸ್ಥಳದ ಪರಿಸ್ಥಿತಿ, ಸಾಕ್ಷ್ಯಾಧಾರಗಳು ಹಾಗೂ ವಿಚಾರಣೆಯ ವೇಳೆ ನೀಡಿದ ಹೇಳಿಕೆಗಳ ಆಧಾರದ ಮೇಲೆ ಪೊಲೀಸರಿಗೆ ಅನುಮಾನ ಬಲವಾಗಿತ್ತು.
ಕೊನೆಗೆ ಪೊಲೀಸರು ತಮ್ಮದೇ ತನಿಖಾ ಕ್ರಮ ಅನುಸರಿಸಿದಾಗ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಬ್ಬಿಣದ ರಾಡ್ನಿಂದ ಹೊಡೆದು ಪತಿಯನ್ನು ಕೊಲೆ ಮಾಡಿರುವುದಾಗಿ ಆರೋಪಿತೆ ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದು, ಪ್ರಕರಣದ ಸಮಗ್ರ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಮೃತ ವಿಶ್ವನಾಥ ಅವರ ಕುಟುಂಬಸ್ಥರು ಘಟನೆಯಿಂದ ದಿಕ್ಕೆಟ್ಟಿದ್ದು, ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿ ಗೌರಮ್ಮ ಹಾಗೂ ಕುಟುಂಬಸ್ಥರ ಆಕ್ರಂದನ ಮನಕಲುಕುವಂತಿತ್ತು.
ಡಿಪ್ಲೊಮಾ ಶಿಕ್ಷಣ ಪಡೆದ ವಿಶ್ವನಾಥ ಹಾಗೂ ಬಿಕಾಂ ಪದವಿ ಪಡೆದ ಕವಿತಾ ಇಬ್ಬರೂ ವಿದ್ಯಾವಂತರಾಗಿದ್ದರೂ, ಕುಟುಂಬದ ಒಳಜಗಳ ಮತ್ತು ಸಂಬಂಧಗಳ ಬಿಕ್ಕಟ್ಟು ಕೊನೆಗೆ ಒಂದು ಜೀವ ಬಲಿಯಾಗುವ ಮಟ್ಟಕ್ಕೆ ತಲುಪಿರುವುದು ನೋವಿನ ಸಂಗತಿಯಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ, ವೈವಾಹಿಕ ಜೀವನದಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳು, ಅನುಮಾನಗಳು ಮತ್ತು ಮನಸ್ತಾಪಗಳು ಮಾತುಕತೆ ಮೂಲಕ ಬಗೆಹರಿಯದಿದ್ದಾಗ ಎಂತಹ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಪ್ರಕರಣದ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / lalita MP