ವಿವಾಹಿತ ಪ್ರಿಯತಮೆಯನ್ನೇ ಕೊಂದ ಪಾತಕಿ : ಜನರ ಎಚ್ಚರಿಕೆಯಿಂದ ಆರೋಪಿ ಪೊಲೀಸರ ವಶಕ್ಕೆ
ವಿಜಯಪುರ, 15 ಮೇ (ಹಿ.ಸ.) : ಆಂಕರ್ : ವಿವಾಹಿತ ಪ್ರಿಯತಮೆಯೊಬ್ಬಳನ್ನು ತನ್ನ ಎರಡನೇ ಮದುವೆಗೆ ಅಡ್ಡಿಯಾಗುತ್ತಿದ್ದಾಳೆ ಎಂಬ ಕಾರಣಕ್ಕೆ ಪ್ರಿಯತಮನೊಬ್ಬ ಬರ್ಬರವಾಗಿ ಹತ್ಯೆಗೈದು, ಬಳಿಕ ಶವವನ್ನು ನದಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ರೋಚಕ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಭಾಗದಲ್ಲಿ ಬ
ಸಾವು


ವಿಜಯಪುರ, 15 ಮೇ (ಹಿ.ಸ.) :

ಆಂಕರ್ : ವಿವಾಹಿತ ಪ್ರಿಯತಮೆಯೊಬ್ಬಳನ್ನು ತನ್ನ ಎರಡನೇ ಮದುವೆಗೆ ಅಡ್ಡಿಯಾಗುತ್ತಿದ್ದಾಳೆ ಎಂಬ ಕಾರಣಕ್ಕೆ ಪ್ರಿಯತಮನೊಬ್ಬ ಬರ್ಬರವಾಗಿ ಹತ್ಯೆಗೈದು, ಬಳಿಕ ಶವವನ್ನು ನದಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ರೋಚಕ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಭಾಗದಲ್ಲಿ ಬೆಳಕಿಗೆ ಬಂದಿದೆ.

ಸಾರ್ವಜನಿಕರ ಸಮಯೋಚಿತ ಎಚ್ಚರಿಕೆಯಿಂದ ಪ್ರಕರಣ ಬಹಿರಂಗವಾಗಿದ್ದು, ಆರೋಪಿ ಇದೀಗ ಪೊಲೀಸರ ವಶದಲ್ಲಿದ್ದಾನೆ. ಮೃತ ಯುವತಿಯನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಟಗಲ್ ಗ್ರಾಮದ ನಿವಾಸಿ ಗಂಗವ್ವ ಸುನೀಲ ತ್ಯಾಪಿ (25) ಎಂದು ಗುರುತಿಸಲಾಗಿದೆ. ಪ್ರಕರಣದ ಆರೋಪಿ ತೇರದಾಳ ಮೂಲದವನಾಗಿದ್ದು, ಸದ್ಯ ಹುನಗುಂದ ತಾಲೂಕಿನ ಮರೋಳ ಗ್ರಾಮದಲ್ಲಿ ವಾಸವಿದ್ದ ಸಮ್ಮೇದ ವಿಜಯ ಸಾಬಣ್ಣವರ ಎಂಬಾತನೆಂದು ತಿಳಿದುಬಂದಿದೆ.

ಶಾಲಾ ಸ್ನೇಹದಿಂದ ಪ್ರೇಮ – ಬಳಿಕ ದುರಂತ ಅಂತ್ಯ ಮೂಲಗಳ ಪ್ರಕಾರ, ಗಂಗವ್ವ ಹಾಗೂ ಸಮ್ಮೇದ ಇಬ್ಬರೂ ಶಾಲಾ ದಿನಗಳಿಂದಲೇ ಪರಿಚಿತರಾಗಿದ್ದು, ಅವರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಆದರೆ ಈ ವಿಷಯ ಮನೆಯವರಿಗೆ ತಿಳಿಯದೇ ಗಂಗವ್ವಳ ಮದುವೆಯನ್ನು ಸವದತ್ತಿ ತಾಲೂಕಿನ ಅರಟಗಲ್ ಗ್ರಾಮದ ಯುವಕನೊಂದಿಗೆ ನೆರವೇರಿಸಲಾಗಿತ್ತು. ಮದುವೆಯ ನಂತರ ಗಂಡನೊಂದಿಗೆ ಗಂಗವ್ವಳಿಗೆ ನಿರಂತರ ಕಲಹ ಉಂಟಾಗುತ್ತಿದ್ದು, ಗಂಡ ಕುಡುಕನಾಗಿದ್ದರಿಂದ ಆಕೆ ಆಗಾಗ ತವರು ಮನೆಗೆ ಬರುತ್ತಿದ್ದಳು ಎನ್ನಲಾಗಿದೆ.

ಕುಟುಂಬದವರು ಪಂಚಾಯತಿ ನಡೆಸಿ ಮತ್ತೆ ಗಂಡನ ಮನೆಗೆ ಕಳುಹಿಸಿದರೂ, ಇತ್ತೀಚೆಗೆ ಗಂಗವ್ವ ಮತ್ತೆ ತವರು ಮನೆಯಲ್ಲಿ ಉಳಿದಿದ್ದಳು. ಇದೇ ವೇಳೆ ತನ್ನ ಹಳೆಯ ಪ್ರಿಯತಮ ಸಮ್ಮೇದನೊಂದಿಗೆ ಆಕೆ ಸಂಪರ್ಕ ಮುಂದುವರೆಸಿದ್ದಳು. ಮನೆಯವರಿಗೆ ತಿಳಿಸದೇ ಆಕೆ ಹುನಗುಂದ ತಾಲೂಕಿನ ಮರೋಳ ಗ್ರಾಮದ ಜಮೀನಿಗೆ ಹೋಗಿ ಸಮ್ಮೇದನೊಂದಿಗೆ ವಾಸಿಸುತ್ತಿದ್ದಳೆಂದು ಹೇಳಲಾಗುತ್ತಿದೆ.

ಮಗಳನ್ನು ಹುಡುಕಿದ ಕುಟುಂಬಸ್ಥರು ಆಕೆಯ ಕಾಣೆಯಾದ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮತ್ತೊಂದು ಮದುವೆಗೆ ಸಿದ್ಧತೆ – ಪ್ರಿಯತಮೆಯೇ ಅಡ್ಡಿ

ಇನ್ನೊಂದೆಡೆ ಆರೋಪಿ ಸಮ್ಮೇದನು ಬೇರೆ ಯುವತಿಯೊಂದಿಗೆ ಮದುವೆಯಾಗಲು ಸಿದ್ಧತೆ ನಡೆಸಿದ್ದನು. ಈ ವಿಷಯ ತಿಳಿದ ಗಂಗವ್ವ, “ನಿನ್ನ ಮದುವೆಗೆ ತಕರಾರು ಮಾಡುತ್ತೇನೆ, ನಿನ್ನನ್ನು ಬೇರೆ ಮದುವೆಯಾಗಲು ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸಮ್ಮೇದ, ತನ್ನ ದಾರಿಯಲ್ಲಿನ ಅಡ್ಡಿಯೆಂದು ಭಾವಿಸಿ ಗಂಗವ್ವಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮೇ 13ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ಮರೋಳ ಗ್ರಾಮದ ಜಮೀನಿನಲ್ಲಿ ಗಂಗವ್ವಳ ಮೇಲೆ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಶವವನ್ನು ನದಿಗೆ ಎಸೆಯಲು ಯತ್ನ – ಸಾರ್ವಜನಿಕರ ಎಚ್ಚರಿಕೆಯಿಂದ ಬಹಿರಂಗ

ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಗಂಗವ್ವಳ ಶವವನ್ನು ಬೈಕ್ ಮೇಲೆ ಹಾಕಿಕೊಂಡು ಆರೋಪಿ ತಂಗಡಗಿ ಗ್ರಾಮದ ಸೇತುವೆ ಬಳಿ ಬಂದಿದ್ದಾನೆ. ರಾತ್ರಿ ವೇಳೆ ಸೇತುವೆ ಮೇಲಿಂದ ಶವವನ್ನು ನದಿಗೆ ಎಸೆಯಲು ಯತ್ನಿಸುತ್ತಿದ್ದಾಗ, ಅಲ್ಲಿಂದ ತೆರಳುತ್ತಿದ್ದ ಸಾರ್ವಜನಿಕರಿಗೆ ಆತನ ವರ್ತನೆ ಅನುಮಾನಾಸ್ಪದವಾಗಿ ಕಂಡಿದೆ.

ಜನರು ಆತನತ್ತ ಧಾವಿಸುತ್ತಿದ್ದಂತೆ ಗಾಬರಿಗೊಂಡ ಆರೋಪಿ, ಶವ ಹಾಗೂ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರ ಪ್ರಶ್ನೆ ಹಾಗೂ ಧರ್ಮದೇಟಿನ ಬಳಿಕ ಆರೋಪಿ ತನ್ನ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರ ತನಿಖೆ ಆರಂಭ

ಘಟನಾ ಸ್ಥಳಕ್ಕೆ ಸಿಪಿಐ ಮೊಹಮ್ಮದ ಫಸಿಯುದ್ದೀನ್ ಹಾಗೂ ಪಿಎಸ್ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಈ ಘಟನೆ ಗ್ರಾಮೀಣ ಭಾಗದಲ್ಲಿ ಭಾರಿ ಆತಂಕ ಮೂಡಿಸಿದ್ದು, ಪ್ರೇಮ ಸಂಬಂಧದ ಹಿನ್ನೆಲೆ ಮತ್ತೊಂದು ಜೀವ ಬಲಿಯಾದ ದಾರುಣ ಘಟನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande