
ಹುಬ್ಬಳ್ಳಿ, 18 ಮೇ (ಹಿ.ಸ.) :
ಆ್ಯಂಕರ್ : ಧಾರವಾಡ ಹಾಗೂ ಹಾವೇರಿ ಜಿಲ್ಲಾ ಪೊಲೀಸರ ಸಂಯುಕ್ತ ಕಾರ್ಯಾಚರಣೆಯಲ್ಲಿ ಅಂತರರಾಜ್ಯ ಕಳ್ಳರ ಗುಂಪೊಂದು ಬಂಧನಕ್ಕೊಳಗಾಗಿದ್ದು ಸುಮಾರು ₹1.15 ಕೋಟಿ ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿ ಕಳೆದ ಏಪ್ರಿಲ್ ನಲ್ಲಿ ನಡೆದ ಮನೆ ಕಳ್ಳತನ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಬಂಗಾರದ ಅಂಗಡಿ ಕಳ್ಳತನ ಪ್ರಕರಣಗಳ ತನಿಖೆಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ, ನವಲಗುಂದ ಠಾಣೆ ಹಾಗೂ ಹಾನಗಲ್ ಠಾಣೆಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತೆಲಂಗಾಣ ರಾಜ್ಯದಿಂದ ಕಳುವು ಮಾಡಲಾದ ಒಂದು ಬುಲೆರೋ ವಾಹನ ಸೇರಿದಂತೆ ಕಳ್ಳತನಕ್ಕೆ ಬಳಸಿದ ಹಾಗೂ ಕಳುವಾದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಡೆಯಿತು. ಜೊತೆಗೆ ಸೈಬರ್ ಕ್ರೈಂ ಪೊಲೀಸ್ ಉಪ ಅಧೀಕ್ಷಕ ಶಿವಾನಂದ ಕಟಗಿ ಮತ್ತು ಧಾರವಾಡ ಗ್ರಾಮೀಣ ಉಪ ವಿಭಾಗದ ಡಿವೈಎಸ್ಪಿ ವಿನೋದ ಮುಕ್ತೆಧಾರ ಅವರ ನೇತೃತ್ವದಲ್ಲಿ ತಂಡ ಕಾರ್ಯನಿರ್ವಹಿಸಿತು.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ, ನವಲಗುಂದ ವೃತ್ತದ ಸಿಪಿಐ ರವಿ ಕಪ್ಪತ್ತಣವರ, ಹಾನಗಲ್ ವೃತ್ತದ ಸಿಪಿಐ ಬಸವರಾಜ ಹಳಬಣ್ಣವರ ಹಾಗೂ ವಿವಿಧ ಠಾಣೆಗಳ ಪಿಎಸ್ಐಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಒಟ್ಟು ಆರು ಜನ ಆರೋಪಿಗಳ ತಂಡದಲ್ಲಿ ನಾಲ್ವರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಬಲೆ ಬೀಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.