
ಚಿತ್ರದುರ್ಗ, 02 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮೂರು ಮೂರು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿದ್ದೇಕೆ? ತಮ್ಮದೇ ಪಕ್ಷದವರ ಹಿಂದಿನ ಹೇಳಿಕೆಗಳನ್ನ ನೆನಪಿಸಿಕೊಳ್ಳಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದರು.
ಚಿತ್ರದುರ್ಗದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಿಎಂ ಸಿದ್ದರಾಮಯ್ಯ ಅವರು ಆಡಳಿತಗಾರರಾಗಿ, ಗ್ಯಾಸ್ ಬೆಲೆ ಹೆಚ್ಚಳದ ಸತ್ಯ ಗೊತ್ತಿದ್ದರೂ ಕೇಂದ್ರವನ್ನು ಟೀಕಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಇವರು ಅಧಿಕಾರಕ್ಕೆ ಬಂದ ಮೇಲೆ ಹಲವು ಬಾರಿ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಎಲ್ಲದರ ಬೆಲೆಯನ್ನೂ ದುಪ್ಪಟ್ಟು ಹೆಚ್ಚಿಸಿದ್ದೇಕೆ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲೆಂದು ಹಾಗೆ ಕೇಂದ್ರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಅಷ್ಟೇ. ಪ್ರಸ್ತುತ ಸಂದಿಗ್ಧತೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ಅನಿವಾರ್ಯ ಎಂಬ ಸತ್ಯ ಅವರಿಗೂ ಗೊತ್ತಿದೆ ಎಂದು ಚಾಟಿ ಬೀಸಿದರು ಜೋಶಿ.
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಇಡೀ ಜಗತ್ತೇ ತತ್ತರಿಸಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್ ಅಭಾವ ಜಗತ್ತಿನೆಲ್ಲೆಡೆ ಇದೆ. ಆದರೆ, ಭಾರತದಲ್ಲಿ ಅದರ ಕೊರತೆ ಉಂಟಾಗದಂತೆ ನಮ್ಮ ಸರ್ಕಾರ ನೋಡಿಕೊಂಡಿದೆ. ಅನೇಕ ಹೊರ ರಾಷ್ಟ್ರಗಳಿಂದ ತರಿಸಿಕೊಳ್ಳುತ್ತಿರುವುದು ವೆಚ್ಚದಾಯಕವಾಗಿದೆ ಎಂದು ಗ್ಯಾಸ್ ಬೆಲೆ ಏರಿಕೆಗೆ ಸಮಜಾಯಿಷಿ ನೀಡಿದರು.
ಹಿಂದೆ ಯುಪಿಎ ಆಡಳಿತದಲ್ಲಿ ಯಾವುದೇ ಜಾಗತಿಕ ಬಿಕ್ಕಟ್ಟು ಇಲ್ಲದಿದ್ದರೂ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಸಿದ್ದರು. ವಿರೋಧಿಸಿದ್ದಕ್ಕೆ ನಾವು ದುಡ್ಡಿನ ಗಿಡ ನೆಟ್ಟಿಲ್ಲ' ಎಂದಿದ್ದರು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಎಂದು ಕಾಂಗ್ರೆಸ್ ನಾಯಕರಿಗೆ ತುಸು ಖಡಕ್ ಆಗಿಯೇ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.
ಗ್ಯಾಸ್ ಬೆಲೆ ಏರಿಕೆ ಬಗ್ಗೆ ಈಗ ಕೇಂದ್ರವನ್ನು ಟೀಕಿಸುವ ಕಾಂಗ್ರೆಸ್ ನಾಯಕರು ಒಮ್ಮೆ ತಮ್ಮವರ ಹಿಂದಿನ ಹೇಳಿಕೆಗಳನ್ನೆಲ್ಲ ಅವಲೋಕಿಸಿಕೊಳ್ಳಲಿ. ವೀರಪ್ಪ ಮೊಯ್ಲಿ, ಮಣಿಶಂಕರ್ ಅಯ್ಯರ್ ಏನೇನು ಹೇಳಿಕೆ ನೀಡಿದ್ದರು ಹಿಂತಿರುಗಿ ನೋಡಲಿ ಎಂದು ತಿರುಗೇಟು ನೀಡಿದರು.
ಭಾರತಕ್ಕೆ ಈವರೆಗೆ 21 ರಾಷ್ಟ್ರಗಳಿಂದ ಮಾತ್ರ ಪೆಟ್ರೋಲಿಯಂ ಉತ್ಪನ್ನ ಬರುತ್ತಿತ್ತು. ಇದೀಗ 47 ರಾಷ್ಟ್ರಗಳಿಂದ ತರಿಸಿಕೊಳ್ಳಲಾಗುತ್ತಿದೆ. ಪರಿಣಾಮ ವೆಚ್ಚವೂ ಸಹಜವಾಗಿಯೇ ಹೆಚ್ಚಾಗಿದೆ. ಹಾಗಾಗಿ. ಪ್ರಸ್ತುತ ಜಾಗತಿಕ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಸಚಿವರು ಗ್ಯಾಸ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಆಡಳಿತದಲ್ಲಿ ಕ್ರೂಡ್ ಆಯಿಲ್ ಬೆಲೆ ಕೇವಲ 60 ರೂ. ಬ್ಯಾರೆಲ್ ಇತ್ತು. ಅದೀಗ 126-127 ರೂ. ಬ್ಯಾರೆಲ್ ಬೆಲೆ ದುಪ್ಪಟ್ಟಾಗಿದೆ. ಇನ್ನೊಂದೆಡೆ ಜಗತ್ತಿನ ಎಲ್ಲೂ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆಯಿಲ್ಲ. ಆದರೆ, ಭಾರತದಲ್ಲಿ ಲಭ್ಯತೆಯಿದೆ. ಹಾಗಿದ್ದರೂ ರಾಹುಲ್ ಗಾಂಧಿ ರಾತ್ರೋರಾತ್ರಿ 'ತೈಲ ಖಾಲಿಯಾಗುತ್ತದೆ' ಎಂದೆಲ್ಲಾ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದರು. ಆದರೆ, ಈವರೆಗೂ ಅಭಾವ ಎದುರಾಗದಂತೆ ಪ್ರಧಾನಿ ಮೋದಿ ಸರ್ಕಾರ ನೋಡಿಕೊಂಡಿದೆ ಎಂದು ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa