
ನವದೆಹಲಿ, 02 ಮೇ (ಹಿ.ಸ.) :
ಆ್ಯಂಕರ್ : ತೃಣಮೂಲ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಸಾಂವಿಧಾನಿಕ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲವೆಂದು ಸ್ಪಷ್ಟಪಡಿಸಿದೆ. ಈ ತೀರ್ಪನ್ನು ಭಾರತೀಯ ಜನತಾ ಪಕ್ಷ ಸ್ವಾಗತಿಸಿದ್ದು, ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ರಾಜಕೀಯ ಟೀಕೆ ನಡೆಸಿದೆ.
ಆಧಾರವಿಲ್ಲದ ಆರೋಪಗಳ ಆಧಾರದ ಮೇಲೆ ತೃಣಮೂಲ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿರುವುದು ಅದರ ಆತಂಕ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಕ್ರಿಯೆ ಮುಂದುವರಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಜನಬೆಂಬಲ ಹಾಗೂ ಮನೋಸ್ಥೈರ್ಯ ಕುಸಿಯುತ್ತಲೇ ಹೋಯಿತು ಎಂದು ಹೇಳಿದರು.
ಶಾಂತಿಯುತ ಹಾಗೂ ಹಿಂಸಾಚಾರರಹಿತ ಮತದಾನ ಮುಗಿದ ನಂತರ ಪಕ್ಷದಲ್ಲಿ ಅಸಮಾಧಾನ ಮತ್ತು ಅಸ್ಥಿರತೆ ಹೆಚ್ಚಾಗಿದೆ ಎಂದರು. ನಿರ್ಗಮನ ಸಮೀಕ್ಷೆಗಳ ಪ್ರವೃತ್ತಿಗಳಿಂದ ಪರಿಸ್ಥಿತಿ ಸ್ಪಷ್ಟವಾಗುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ಯಾವುದೇ ಆಧಾರವಿಲ್ಲದೆ ಸಮಸ್ಯೆಗಳನ್ನು ಎತ್ತಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ ಎಂದು ಅವರು ಆರೋಪಿಸಿದರು.
ಕಳೆದ ಹತ್ತು ರಿಂದ ಹನ್ನೆರಡು ವರ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ನ್ಯಾಯಾಂಗದ ವಿವಿಧ ಹಂತಗಳಲ್ಲಿ 80ಕ್ಕೂ ಹೆಚ್ಚು ಬಾರಿ ಮೇಲ್ಮನವಿ ಸಲ್ಲಿಸಿದ್ದರೂ, ಬಹುತೇಕ ಸಂದರ್ಭಗಳಲ್ಲಿ ನಿರಾಶೆಗೆ ಒಳಗಾಗಿದೆ ಎಂದು ಅವರು ಹೇಳಿದರು. ಸಾಂವಿಧಾನಿಕ ದೃಷ್ಟಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ.
ವಕೀಲ ಕಪಿಲ್ ಸಿಬಲ್ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಲಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ, ಐಪಿಎಸಿ ಕಚೇರಿ ಮೇಲಿನ ದಾಳಿಯ ಸಂದರ್ಭದಲ್ಲಿಯೂ ಮುಖ್ಯಮಂತ್ರಿಯವರ ಸ್ವತಃ ಸ್ಥಳಕ್ಕೆ ಆಗಮಿಸಿರುವುದು ಪಕ್ಷದೊಳಗಿನ ವಿಶ್ವಾಸದ ಕೊರತೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ಬಾಬರಿ ಮಸೀದಿ ಕ್ರಿಯಾ ಸಮಿತಿಯನ್ನು ಒಳಗೊಂಡ ಹಲವು ಪ್ರಕರಣಗಳಲ್ಲಿ ಪಕ್ಷಗಳನ್ನು ಪ್ರತಿನಿಧಿಸಿರುವ ಮತ್ತು ತೃಣಮೂಲ ಕಾಂಗ್ರೆಸ್ಗೆ ರಾಜಕೀಯವಾಗಿ ಒಲವು ಹೊಂದಿರುವ ಕಪಿಲ್ ಸಿಬಲ್ ಅವರಿಗೆ ತಮ್ಮದೇ ಅರ್ಜಿಯ ಬಗ್ಗೆ ಸ್ಪಷ್ಟ ಅರಿವು ಇಲ್ಲ ಎಂದು ಸುಧಾಂಶು ತ್ರಿವೇದಿ ಟೀಕಿಸಿದರು.
ಸಾಂವಿಧಾನಿಕ ದೃಷ್ಟಿಕೋನದಿಂದ ಸುಪ್ರೀಂ ಕೋರ್ಟ್ ತೀರ್ಪು ಸಮರ್ಥನೀಯವಾಗಿದ್ದು, ರಾಜಕೀಯ ಮತ್ತು ನೈತಿಕ ದೃಷ್ಟಿಯಿಂದ ಇದು ತೃಣಮೂಲ ಕಾಂಗ್ರೆಸ್ನ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa