ಶಾಸಕ ಸ್ಥಾನದಿಂದ ಕಾಂಗ್ರೆಸ್ ನ ವಿನಯ್ ಕುಲಕರ್ಣಿ ಅನರ್ಹ
ದೋಷಾರೋಪಣಾ ಪಟ್ಟಿ
Order copy


ಬೆಂಗಳೂರು, 02 ಮೇ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವನ್ನು ರಾಜ್ಯ ವಿಧಾನ ಸಭೆ ಕಾರ್ಯದರ್ಶಿ ಅಧಿಕೃತವಾಗಿ ಅನರ್ಹಗೊಳಿಸಿ ಪ್ರಕಟಣೆ ಹೊರಡಿಸಿದ್ದಾರೆ. ಇದರೊಂದಿಗೆ ಧಾರವಾಡ ವಿಧಾನ ಸಭಾ ಕ್ಷೇತ್ರ ತೆರವಾಗಿರುವುದಾಗಿ ಘೋಷಿಸಲಾಗಿದೆ.

ಪ್ರಕಟಣೆಯ ಪ್ರಕಾರ, ಏಪ್ರಿಲ್ 15ರಿಂದಲೇ ವಿನಯ್ ಕುಲಕರ್ಣಿ ಅವರ ಸದಸ್ಯತ್ವ ರದ್ದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನ್ಯಾಯಾಲಯದ ತೀರ್ಪು ಹಿನ್ನೆಲೆ

ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್ 13ರಂದು ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಮಂದಿಯನ್ನು ದೋಷಿ ಎಂದು ಘೋಷಿಸಿತ್ತು. ಬಳಿಕ ಏಪ್ರಿಲ್ 15ರಂದು ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಈ ತೀರ್ಪಿನ ಆಧಾರದ ಮೇಲೆ ಶಾಸಕರಾಗಿ ಮುಂದುವರಿಯುವ ಅರ್ಹತೆ ಇಲ್ಲದಿರುವ ಕಾರಣ ವಿಧಾನಸಭೆ ಕಾರ್ಯದರ್ಶಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈಕೋರ್ಟ್ ಗೆ ಮೇಲ್ಮನವಿ

ಈಗಾಗಲೇ ವಿನಯ್ ಕುಲಕರ್ಣಿ ಹಾಗೂ ಮತ್ತೊಬ್ಬ ಅಪರಾಧಿ ಚಂದ್ರಶೇಖರ್ ಇಂಡಿ ಜೀವಾವಧಿ ಶಿಕ್ಷೆ ತೀರ್ಪಿಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತೀರ್ಪಿಗೆ ತಾತ್ಕಾಲಿಕ ತಡೆ ನೀಡುವಂತೆ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

2016ರಲ್ಲಿ ಯೋಗೇಶ್ ಗೌಡ ಕೊಲೆ ನಡೆದಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಮಂದಿ ವಿರುದ್ಧ ಆರೋಪ ದಾಖಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಸಿಬಿಐ ದೀರ್ಘ ತನಿಖೆಯ ನಂತರ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.

ಸುಮಾರು 10 ವರ್ಷಗಳ ತನಿಖೆ ಮತ್ತು ವಿಚಾರಣೆಯ ಬಳಿಕ, ಕೊಲೆ, ಅಪರಾಧ ಸಂಚು, ಸಾಕ್ಷ್ಯ ನಾಶ, ಮಾರಕಾಸ್ತ್ರಗಳಿಂದ ಹಲ್ಲೆ ಹಾಗೂ ಅಕ್ರಮ ಕೂಟ ಆರೋಪಗಳಡಿ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande