
ನವದೆಹಲಿ, 02 ಮೇ (ಹಿ.ಸ.) :
ಆ್ಯಂಕರ್ : ಖ್ಯಾತ ಗೀತರಚನೆಕಾರ, ಬರಹಗಾರ ಹಾಗೂ ಸಂವಹನ ತಜ್ಞ ಪ್ರಸೂನ್ ಜೋಶಿ ಅವರನ್ನು ದೇಶದ ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿಯ ಅಧ್ಯಕ್ಷರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ಶನಿವಾರ ಪ್ರಕಟಣೆ ನೀಡಿದೆ.
ಪ್ರಸಾರ ಭಾರತಿಯ ಹಿಂದಿನ ಅಧ್ಯಕ್ಷ ನವನೀತ್ ಸೆಹಗಲ್ ಅವರು ಕಳೆದ ಡಿಸೆಂಬರ್ 4ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಈ ಸ್ಥಾನ ಖಾಲಿಯಾಗಿತ್ತು. ಹಲವು ತಿಂಗಳುಗಳ ಬಳಿಕ ಇದೀಗ ಆ ಹುದ್ದೆಗೆ ನೇಮಕ ಮಾಡಲಾಗಿದೆ.
ರೈಲು, ಮಾಹಿತಿ ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಜೋಶಿ ಅವರ ನೇಮಕವನ್ನು ಸ್ವಾಗತಿಸಿ, ಸಾಹಿತ್ಯ, ಜಾಹೀರಾತು ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಅವರ ಅನುಭವ ಪ್ರಸಾರ ಭಾರತಿಗೆ ಹೊಸ ಚೈತನ್ಯ ಮತ್ತು ದಿಕ್ಕು ನೀಡಲಿದೆ ಎಂದು ತಿಳಿಸಿದ್ದಾರೆ.
ಪ್ರಸೂನ್ ಜೋಶಿ ಅವರು ಈ ಹಿಂದೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅಧ್ಯಕ್ಷರಾಗಿದ್ದು, ಚಲನಚಿತ್ರ ಪ್ರಮಾಣೀಕರಣ ಕ್ರಮಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಜಾಹೀರಾತು ಕ್ಷೇತ್ರದಲ್ಲೂ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2016ರಿಂದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸಾರ ಭಾರತಿ ದೇಶದ ಪ್ರಮುಖ ಸಾರ್ವಜನಿಕ ಸೇವಾ ಪ್ರಸಾರ ಸಂಸ್ಥೆಯಾಗಿದ್ದು, ಆಕಾಶವಾಣಿ ಹಾಗೂ ದೂರದರ್ಶನದ ಮೂಲಕ ದೇಶಾದ್ಯಂತ ಸುದ್ದಿ, ಶಿಕ್ಷಣ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa