
ಗದಗ, 14 ಮೇ (ಹಿ.ಸ.)
ಆ್ಯಂಕರ್:
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯಲ್ಲಿ ಕೇಬಲ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂಗಾರು ಬಿತ್ತನೆ ಕಾರ್ಯದ ಮಧ್ಯೆಯೇ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಡಂಬಳ ಗ್ರಾಮದ ವ್ಯಾಪ್ತಿಯ 10ಕ್ಕೂ ಹೆಚ್ಚು ರೈತರ ಕೊಳವೆಬಾವಿಗಳ ಕೇಬಲ್, ಸ್ಟಾರ್ಟರ್ ಬಾಕ್ಸ್ ಹಾಗೂ ವಿದ್ಯುತ್ ಉಪಕರಣಗಳನ್ನು ದುಷ್ಕರ್ಮಿಗಳು ರಾತ್ರಿ ವೇಳೆ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಿನ ಜಾವ ಮೋಟಾರ್ಗಳು ಚಾಲನೆ ಆಗದ ಹಿನ್ನೆಲೆಯಲ್ಲಿ ರೈತರು ಜಮೀನುಗಳಿಗೆ ತೆರಳಿ ಪರಿಶೀಲಿಸಿದಾಗ ಕೇಬಲ್ ಕಳ್ಳತನವಾಗಿರುವುದು ಗೊತ್ತಾಗಿದೆ. ಕೆಲವೆಡೆ ನೂರಾರು ಮೀಟರ್ ಉದ್ದದ ಕೇಬಲ್ಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿರುವುದರಿಂದ ರೈತರು ಬೆಚ್ಚಿಬಿದ್ದಿದ್ದಾರೆ.
ಮಳೆ ಅಭಾವದಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ರೈತರು ಬೋರವೆಲ್ ಮೋಟಾರ್ಗಳ ಮೂಲಕ ಬೆಳೆಗಳಿಗೆ ನೀರು ಹರಿಸುತ್ತಿದ್ದರು. ಮುಂಗಾರು ಬಿತ್ತನೆಗಾಗಿ ಭೂಮಿ ಹದಗೊಳಿಸಿ ಹಲವರು ಬಿತ್ತನೆ ಕಾರ್ಯವೂ ಆರಂಭಿಸಿದ್ದರು. ಇಂತಹ ಸಮಯದಲ್ಲೇ ಕೇಬಲ್ ಕಳ್ಳತನ ನಡೆದಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಡಂಬಳ ಹೋಬಳಿಯ 24ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಳೆದ ಕೆಲವು ತಿಂಗಳಿಂದ ಬೋರವೆಲ್ಗಳ ಸ್ಟಾರ್ಟರ್ ಡಬ್ಬಿಗಳು, ವಿದ್ಯುತ್ ಕೇಬಲ್ಗಳು, ಹನಿ ನೀರಾವರಿ ಯೋಜನೆಯಡಿ ಅಳವಡಿಸಿರುವ ನೆಟಾಫಿಮ್ ಹಾಗೂ ಮೇಗಾ ಕಂಪನಿಗಳ ಲ್ಯಾಟರಲ್ ಪೈಪುಗಳು, ವಿಂಡ್ ಫ್ಯಾನ್ಗಳಿಗೆ ಅಳವಡಿಸಿದ ದುಬಾರಿ ವೈರ್ಗಳು, ಪ್ಲಾಸ್ಟಿಕ್ ಹಾಗೂ ಕಬ್ಬಿಣದ ಪೈಪುಗಳು ಸೇರಿದಂತೆ ಹಲವು ಕೃಷಿ ಉಪಕರಣಗಳು ನಿರಂತರವಾಗಿ ಕಳ್ಳತನವಾಗುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.
ಕೇಬಲ್ ಕಳ್ಳರ ಕಾಟದಿಂದ ನೂರಾರು ರೈತರು ಹೈರಾಣಾಗಿದ್ದು, ಕೃಷಿ ಚಟುವಟಿಕೆಗಳೇ ಅಸ್ತವ್ಯಸ್ತಗೊಂಡಿವೆ. ಬೆಳೆಗಳಿಗೆ ನೀರು ಹರಿಸಲು ಮತ್ತೆ ಹೊಸದಾಗಿ ಕೇಬಲ್ ಸಂಪರ್ಕ ಕಲ್ಪಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಇದಕ್ಕಾಗಿ ರೈತರು ಸಾಲ-ಸೂಲ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
“ದುಬಾರಿ ಗೊಬ್ಬರ ಖರೀದಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ 350 ಮೀಟರ್ಗೂ ಹೆಚ್ಚು ಕೇಬಲ್ ಕಳ್ಳತನವಾಗಿರುವುದು ರೈತರಿಗೆ ದೊಡ್ಡ ಹೊಡೆತವಾಗಿದೆ. ಕೂಡಲೇ ಕಳ್ಳರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ರೈತರಾದ ಮಹೇಶ ಗಡಗಿ, ಬಸವರಾಜ ಹಂಚನಾಳ, ಮಾಂತೇಶ ಪ್ಯಾಟಿ, ಶರಣಪ್ಪ ಪ್ಯಾಟಿ, ವಿಕಾಶ ಗಡಗಿ ಹಾಗೂ ಯಂಕಣ್ಣ ಗಡಗಿ ಆಗ್ರಹಿಸಿದರು.
ರಾತ್ರಿ ವೇಳೆಯಲ್ಲಿ ಜಮೀನುಗಳಿಗೆ ವಿದ್ಯುತ್ ಸರಬರಾಜು ಇಲ್ಲದಿರುವುದು ಹಾಗೂ ಕಳ್ಳರ ಭಯದಿಂದ ರೈತರು ಹೊಲಗಳಿಗೆ ತೆರಳುವುದನ್ನೇ ಕಡಿಮೆ ಮಾಡಿದ್ದಾರೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಳ್ಳರು ಕೇಬಲ್ ಮಾತ್ರವಲ್ಲದೆ ನೀರು ಮೇಲೆತ್ತಲು ಬಳಸುವ ಪ್ಲಾಸ್ಟಿಕ್ ಮತ್ತು ಕಬ್ಬಿಣದ ಪೈಪುಗಳನ್ನೂ ಹಾನಿಗೊಳಿಸುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.
ಇದರಿಂದ ನೀರಾವರಿ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಬಿತ್ತನೆ ಮಾಡಿರುವ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಮಳೆಗಾಲದಲ್ಲಿಯೇ ಬೋರ್ವೆಲ್ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಅನ್ನದಾತರ ನಿದ್ದೆಗೆಡಿಸಿದೆ.
ಡಂಬಳ, ಡೋಣಿ ಹಾಗೂ ಮೇವುಂಡಿ ಗ್ರಾಮದ ಮಧ್ಯದ ಜಮೀನುಗಳಲ್ಲಿ ರೈತರ ವೈರ್, ಕೇಬಲ್ ಹಾಗೂ ಪಂಪ್ಸೆಟ್ಗಳಿಗೆ ಬೇಕಾಗುವ ವಿದ್ಯುತ್ ಉಪಕರಣಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ಕಳುವಾಗಿದ್ದರೂ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಅಸಮಾಧಾನ ರೈತರಲ್ಲಿದೆ.
ಪೊಲೀಸ್ ಠಾಣೆಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ದೂರು ದಾಖಲಾಗಿದ್ದರೂ ಕಳ್ಳರನ್ನು ಬಂಧಿಸಿ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿರುವುದರಿಂದ ರೈತರ ಆಕ್ರೋಶ ಹೆಚ್ಚಾಗಿದೆ.
“ರೈತರ ಕೇಬಲ್ ಹಾಗೂ ವಿದ್ಯುತ್ ಉಪಕರಣ ಕಳ್ಳತನ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಕಳ್ಳತನ ತಡೆಗೆ ಕ್ರಮ ಕೈಗೊಂಡು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದು,” ಎಂದು ನರಗುಂದ ಡಿವೈಎಸ್ಪಿ ಪ್ರಭುಗೌಡ ತಿಳಿಸಿದ್ದಾರೆ.
ಕಳ್ಳರ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದ್ದು, ಕೂಡಲೇ ವಿಶೇಷ ಪೊಲೀಸ್ ತಂಡ ರಚಿಸಿ ಕಳ್ಳರನ್ನು ಬಂಧಿಸಬೇಕು. ಜೊತೆಗೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP