ಧಾರದಿಂದ ಇಂಡೋನೇಷ್ಯಾ ಮತ್ತು ವಾಷಿಂಗ್ಟನ್ವರೆಗೆ ಮೊಳಗುತ್ತಿರುವ ಜ್ಞಾನ ಸಂಸ್ಕೃತಿ
ಧಾರದಿಂದ ಇಂಡೋನೇಷ್ಯಾ ಮತ್ತು ವಾಷಿಂಗ್ಟನ್ವರೆಗೆ ಮೊಳಗುತ್ತಿರುವ ಜ್ಞಾನ ಸಂಸ್ಕೃತಿ ಲೇಖಕರು : ಡಾ. ಮಯಂಕ್ ಚತುರ್ವೇದಿ ಧಾರದಲ್ಲಿರುವ ಭೋಜಶಾಲೆಯ ತಾಯಿ ಸರಸ್ವತಿ ದೇವಿಯ ಸ್ಥಳಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯ ನೀಡಿದ ತೀರ್ಪು, ಸಾವಿರಾರು ವರ್ಷಗಳಿಂದ ಜ್ಞಾನ, ಶಿಕ್ಷಣ, ಕಲೆ ಮತ್ತು ನಾಗರಿಕತೆಗೆ ದಿ
ಸರಸ್ವತಿ ಚಿತ್ರ


ಧಾರದಿಂದ ಇಂಡೋನೇಷ್ಯಾ ಮತ್ತು ವಾಷಿಂಗ್ಟನ್ವರೆಗೆ ಮೊಳಗುತ್ತಿರುವ ಜ್ಞಾನ ಸಂಸ್ಕೃತಿ

ಲೇಖಕರು :

ಡಾ. ಮಯಂಕ್ ಚತುರ್ವೇದಿ

ಧಾರದಲ್ಲಿರುವ ಭೋಜಶಾಲೆಯ ತಾಯಿ ಸರಸ್ವತಿ ದೇವಿಯ ಸ್ಥಳಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯ ನೀಡಿದ ತೀರ್ಪು, ಸಾವಿರಾರು ವರ್ಷಗಳಿಂದ ಜ್ಞಾನ, ಶಿಕ್ಷಣ, ಕಲೆ ಮತ್ತು ನಾಗರಿಕತೆಗೆ ದಿಕ್ಕು ತೋರಿದ ಸನಾತನ ಚೇತನೆಯ ಜಾಗತಿಕ ಮಾನ್ಯತೆಯಾಗಿದೆ. ವಿಶ್ವದ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾ ದೇಶವು ಅಮೆರಿಕದ ರಾಜಧಾನಿಯಾದ ವಾಷಿಂಗ್ಟನ್ ಡಿ.ಸಿ. ಯಲ್ಲಿ 16 ಅಡಿ ಎತ್ತರದ ತಾಯಿ ಸರಸ್ವತಿಯ ಭವ್ಯ ಪ್ರತಿಮೆಯನ್ನು ಸ್ಥಾಪಿಸಿರುವುದು, ಜ್ಞಾನದ ದೇವಿ ಯಾವ ಒಂದು ಧರ್ಮ, ಜಾತಿ ಅಥವಾ ದೇಶದ ಗಡಿಗಳಲ್ಲೂ ಸೀಮಿತಳಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಕಮಲದ ಮೇಲೆ ಆಸೀನಳಾಗಿ ವೀಣೆ ಹಿಡಿದಿರುವ ತಾಯಿ ಸರಸ್ವತಿ ಇಂದು ವೈಟ್ ಹೌಸ್ನಿಂದ ಅಲ್ಪ ದೂರದಲ್ಲಿ ನಿಂತು, ನಾಗರಿಕತೆಗಳ ನಿಜವಾದ ಶಕ್ತಿ ಶಸ್ತ್ರಾಸ್ತ್ರಗಳಲ್ಲಿ ಅಲ್ಲ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತಿದ್ದಾಳೆ.

ವಾಸ್ತವವಾಗಿ, ಮಧ್ಯಪ್ರದೇಶದ ಧಾರದಲ್ಲಿರುವ ಭೋಜಶಾಲೆ ಕುರಿತು ಬಂದಿರುವ ನ್ಯಾಯಾಂಗ ತೀರ್ಪು, ವರ್ಷಗಳ ಕಾಲ ರಾಜಕೀಯ ಮತ್ತು ವಿವಾದಗಳ ನಡುವೆ ಮರೆಮಾಚಲು ಪ್ರಯತ್ನಿಸಲಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸತ್ಯವನ್ನು ಮತ್ತೆ ಹೊರತಂದಿದೆ. ಇದು ಕೇವಲ ಒಂದು ಕಟ್ಟಡದ ಪ್ರಶ್ನೆಯಲ್ಲ; ಭಾರತೀಯ ಜ್ಞಾನ ಪರಂಪರೆ, ತಾಯಿ ವಾಗ್ದೇವಿಯ ಆರಾಧನೆ ಮತ್ತು ಭಾರತದ ಸಾಂಸ್ಕೃತಿಕ ಸ್ಮರಣೆಯ ಪ್ರಶ್ನೆಯಾಗಿದೆ, ಅದು ಭಾರತ ಭೂಮಿಯಿಂದ ವಿಶ್ವದ ಪ್ರತಿಯೊಂದು ಮೂಲೆಯವರೆಗೆ ತಲುಪಿದೆ.

ಸನಾತನ ಪರಂಪರೆಯಲ್ಲಿ ತಾಯಿ ಸರಸ್ವತಿ ಕೇವಲ ದೇವಿಯಲ್ಲ, ಜ್ಞಾನದ ಚೇತನವಾಗಿದೆ. ಅವರ ಕೈಯಲ್ಲಿರುವ ವೀಣೆ ಕಲೆಯ ಸಂಕೇತ, ಪುಸ್ತಕ ಜ್ಞಾನದ ಸಂಕೇತ, ಮಾಲೆ ಸಾಧನೆಯ ಸಂಕೇತ ಮತ್ತು ಶ್ವೇತ ಕಮಲ ಪವಿತ್ರತೆಯ ಸಂದೇಶವನ್ನು ಸಾರುತ್ತದೆ. ಭಾರತೀಯ ಸಂಸ್ಕೃತಿ ಶತಮಾನಗಳ ಹಿಂದೆಯೇ ಶಿಕ್ಷಣವು ಕೇವಲ ಉದ್ಯೋಗದ ಸಾಧನವಲ್ಲ, ಅದು ಮನುಷ್ಯನನ್ನು ಸಂಸ್ಕರಿಸುವ ಪ್ರಕ್ರಿಯೆ ಎಂಬುದನ್ನು ಒಪ್ಪಿಕೊಂಡಿತ್ತು. ಅದಕ್ಕಾಗಿಯೇ ತಾಯಿ ಸರಸ್ವತಿಯ ಆರಾಧನೆ ಭಾರತದಲ್ಲಿ ಮಕ್ಕಳ ಮೊದಲ ಶಿಕ್ಷಣದಿಂದ ಮಹಾನ್ ಪಂಡಿತರ ಸಾಧನೆವರೆಗೆ ಅವಿಭಾಜ್ಯ ಅಂಗವಾಗಿದೆ.

ಮುಸ್ಲಿಂ ಬಹುಸಂಖ್ಯಾತ ದೇಶ ಅರಿತ ಸರಸ್ವತಿಯ ಮಹತ್ವ

ಇಂಡೋನೇಷ್ಯಾದ ಸುಮಾರು 88 ಶೇಕಡಾ ಜನಸಂಖ್ಯೆ ಮುಸ್ಲಿಮರದ್ದು. ಹಿಂದೂಗಳ ಸಂಖ್ಯೆ ಕೇವಲ ಮೂರು ಶೇಕಡಾ ಸುತ್ತಮುತ್ತ ಮಾತ್ರ ಇದೆ. ಆದರೂ ಅಲ್ಲಿನ ಸರ್ಕಾರ ಅಮೆರಿಕಕ್ಕೆ ತಾಯಿ ಸರಸ್ವತಿಯ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿ, ಶಿಕ್ಷಣ ಮತ್ತು ಜ್ಞಾನ ಯಾವ ಒಂದು ಧರ್ಮ ಅಥವಾ ಪಂಥದ ಸ್ವತ್ತೂ ಅಲ್ಲ ಎಂಬ ಸಂದೇಶ ನೀಡಿದೆ. ಇಂಡೋನೇಷ್ಯಾ ರಾಯಭಾರ ಕಚೇರಿ ಕೂಡ “ಈ ಪ್ರತಿಮೆ ಕೇವಲ ಧಾರ್ಮಿಕ ಸಂಕೇತವಲ್ಲ; ಶಿಕ್ಷಣ, ಸಾಂಸ್ಕೃತಿಕ ಸಂವಾದ ಮತ್ತು ಜನರ ನಡುವಿನ ಸಂಬಂಧಗಳನ್ನು ಬಲಪಡಿಸುವ ಮಾಧ್ಯಮ” ಎಂದು ಸ್ಪಷ್ಟಪಡಿಸಿದೆ. ಇದೇ ದೃಷ್ಟಿಕೋಣ ಬಾಲಿಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಹಿಂದೂ ಸಂಪ್ರದಾಯಗಳಿಗೆ ಗೌರವ ನೀಡುವಂತೆ ಮಾಡಿದೆ.

ಇಂಡೋನೇಷ್ಯಾ ಅಧ್ಯಕ್ಷರು ಸರಸ್ವತಿ ಪ್ರತಿಮೆಯ ಅನಾವರಣ ಸಂದರ್ಭದಲ್ಲಿ, “ಈ ಪ್ರತಿಮೆ ಜನರ ಮನಸ್ಸು ಮತ್ತು ಹೃದಯಗಳನ್ನು ತೆರೆದು, ದ್ವೇಷ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡಲಿದೆ” ಎಂದು ಹೇಳಿದ್ದಾರೆ. ಈ ಸಂದೇಶ ಇಂದು ಸಂಪೂರ್ಣ ಜಗತ್ತಿಗೆ ಅತ್ಯಂತ ಪ್ರಸ್ತುತವಾಗಿದೆ. ಧರ್ಮ ಸಂಘರ್ಷ, ಅತಿರೇಕ ಮತ್ತು ಸಾಂಸ್ಕೃತಿಕ ಘರ್ಷಣೆಗಳ ಈ ಕಾಲದಲ್ಲಿ ತಾಯಿ ಸರಸ್ವತಿಯ ಸಂದೇಶ ಜ್ಞಾನ, ಸಂವಾದ ಮತ್ತು ಸಹಬಾಳ್ವೆಯ ಸಂದೇಶವಾಗಿದೆ. ಅದಕ್ಕಾಗಿಯೇ ಅಮೆರಿಕದಂತಹ ದೇಶದಲ್ಲೂ ಈ ಪ್ರತಿಮೆ ಜನರ ಆಕರ್ಷಣೆಯ ಕೇಂದ್ರವಾಗಿದೆ.

ಇಂದು ವಾಷಿಂಗ್ಟನ್ನಲ್ಲಿ ಸ್ಥಾಪಿಸಲಾದ ಪ್ರತಿಮೆ ವಿಶ್ವವು ಈಗ ಶಿಕ್ಷಣವನ್ನು ದೇವರ ರೂಪವೆಂದು ಕಂಡ ಭಾರತೀಯ ತತ್ವವನ್ನು ಅರ್ಥಮಾಡಿಕೊಳ್ಳುತ್ತಿದೆ ಎಂಬುದಕ್ಕೆ ಸಂಕೇತವಾಗಿದೆ. ಜಗತ್ತಿನ ಅತಿ ದೊಡ್ಡ ಮುಸ್ಲಿಂ ಬಹುಸಂಖ್ಯಾತ ದೇಶವೇ ಸರಸ್ವತಿಯನ್ನು ಜ್ಞಾನದ ಸಾರ್ವತ್ರಿಕ ದೇವಿಯಾಗಿ ಒಪ್ಪಿಕೊಳ್ಳುವಾಗ, ಭಾರತದಲ್ಲಿ ಸ್ವಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹಿಂಜರಿಕೆ ಮತ್ತು ಸಂಘರ್ಷ ಏಕೆ ಇರಬೇಕು? ಇದೇ ಪ್ರಶ್ನೆ ಭೋಜಶಾಲೆ ವಿವಾದದ ಕೇಂದ್ರದಲ್ಲೂ ಕಾಣಿಸುತ್ತದೆ. ಭಾರತವೂ ತನ್ನ ಶಿಕ್ಷಣ ಮತ್ತು ಸಂಸ್ಕೃತಿಯ ಪರಂಪರೆಯನ್ನು ಹೊಸ ಆತ್ಮವಿಶ್ವಾಸದೊಂದಿಗೆ ಜಗತ್ತಿನ ಮುಂದೆ ಇಡಬೇಕಾಗಿದೆ. ಭೋಜಶಾಲೆ ಅದಕ್ಕೆ ಜೀವಂತ ಉದಾಹರಣೆಯಾಗಬಹುದು.

ಭೋಜಶಾಲೆ ಕೇವಲ ಕಟ್ಟಡವಲ್ಲ, ಜ್ಞಾನದ ತೀರ್ಥಕ್ಷೇತ್ರ

ಧಾರದಲ್ಲಿನ ಭೋಜಶಾಲೆ ಕುರಿತು ದೀರ್ಘಕಾಲದಿಂದ ವಿವಾದ ನಡೆಯುತ್ತಲೇ ಬಂದಿದೆ. ಇತಿಹಾಸಕಾರರು, ಪುರಾತತ್ವ ತಜ್ಞರು ಮತ್ತು ಸ್ಥಳೀಯ ಪರಂಪರೆಗಳ ಪ್ರಕಾರ, ಇದನ್ನು ಪರಮಾರ ವಂಶದ ಮಹಾನ್ ರಾಜ ರಾಜಾ ಭೋಜ ಸ್ಥಾಪಿಸಿದ ತಾಯಿ ವಾಗ್ದೇವಿಯ ದೇವಸ್ಥಾನ ಮತ್ತು ಸಂಸ್ಕೃತ ಶಿಕ್ಷಣ ಕೇಂದ್ರವೆಂದು ಪರಿಗಣಿಸಲಾಗಿದೆ. ರಾಜಾ ಭೋಜ ಕೇವಲ ಆಡಳಿತಗಾರನಲ್ಲ, ಮಹಾನ್ ಪಂಡಿತ, ಸಾಹಿತ್ಯಕಾರ ಮತ್ತು ಶಿಕ್ಷಣ ಸಂರಕ್ಷಕರಾಗಿದ್ದರು. ಅವರ ರಾಜಧಾನಿ ಧಾರ ಅನೇಕ ವರ್ಷಗಳ ಕಾಲ ಭಾರತೀಯ ಜ್ಞಾನ ಪರಂಪರೆಯ ಪ್ರಮುಖ ಕೇಂದ್ರವಾಗಿತ್ತು.

ಭೋಜಶಾಲೆಯಲ್ಲಿ ತಾಯಿ ಸರಸ್ವತಿಯ ಆರಾಧನೆ ನಡೆಯುತ್ತಿತ್ತು ಮತ್ತು ಇಲ್ಲಿ ಪಂಡಿತರ ಸಭೆಗಳು ನಡೆಯುತ್ತಿದ್ದವು. ಅದಕ್ಕಾಗಿಯೇ ಇದನ್ನು “ವಿದ್ಯೆಯ ತಪೋಭೂಮಿ” ಎಂದು ಕರೆಯಲಾಗುತ್ತಿತ್ತು. ಇಲ್ಲಿ ದೊರೆತ ಶಿಲಾಶಾಸನಗಳು, ವಾಸ್ತುಶಿಲ್ಪ ಶೈಲಿ, ಕಂಬಗಳ ಕೆತ್ತನೆಗಳು ಮತ್ತು ಸಂಸ್ಕೃತ ಶಾಸನಗಳು ಈ ಸ್ಥಳ ಭಾರತೀಯ ಜ್ಞಾನ ಪರಂಪರೆಯೊಂದಿಗೆ ಆಳವಾಗಿ ಸಂಬಂಧಿಸಿದ್ದನ್ನು ದೃಢಪಡಿಸುತ್ತವೆ.

ಇಂದಿನ ತೀರ್ಪು ಮತ್ತು ಹೊರಬರುತ್ತಿರುವ ಸಾಕ್ಷ್ಯಗಳು

ಇಂದು ಬಂದಿರುವ ನ್ಯಾಯಾಲಯದ ತೀರ್ಪು ಮತ್ತು ಭಾರತೀಯ ಪುರಾತತ್ವ ಸಮೀಕ್ಷೆಯ ವರದಿಗಳು ಭೋಜಶಾಲೆಗೆ ಸಂಬಂಧಿಸಿದ ಅನೇಕ ಪ್ರಮುಖ ಸಂಗತಿಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿವೆ. ಸಮೀಕ್ಷೆಯಲ್ಲಿ ದೇವಸ್ಥಾನ ವಾಸ್ತುಶಿಲ್ಪ ಶೈಲಿ, ದೇವತೆಗಳಿಗೆ ಸಂಬಂಧಿಸಿದ ಚಿಹ್ನೆಗಳು, ಕಮಲದ ಆಕೃತಿಗಳು, ಸಂಸ್ಕೃತ ಶಿಲಾಶಾಸನಗಳು ಮತ್ತು ಹಿಂದೂ ಸಂಕೇತಗಳ ಸಾಕ್ಷ್ಯಗಳು ದೊರೆತಿವೆ. ಕಟ್ಟಡದ ಅನೇಕ ಭಾಗಗಳು ಮೂಲ ಹಿಂದೂ ವಾಸ್ತುಶಿಲ್ಪದ ಆಧಾರದ ಮೇಲೆ ನಿರ್ಮಾಣಗೊಂಡಿವೆ ಎಂಬುದೂ ಸ್ಪಷ್ಟವಾಗಿದೆ. ಈ ಸಾಕ್ಷ್ಯಗಳು ಭೋಜಶಾಲೆ ಮೂಲತಃ ತಾಯಿ ವಾಗ್ದೇವಿಯ ದೇವಸ್ಥಾನ ಮತ್ತು ಶಿಕ್ಷಣ ಕೇಂದ್ರವಾಗಿತ್ತು ಎಂಬ ಐತಿಹಾಸಿಕ ಅಭಿಪ್ರಾಯಕ್ಕೆ ಬಲ ತುಂಬಿವೆ.

ಶಿಕ್ಷಣವೇ ರಾಷ್ಟ್ರದ ಅತಿ ದೊಡ್ಡ ಶಕ್ತಿ

ಯಾವುದೇ ರಾಷ್ಟ್ರದ ನಿಜವಾದ ಶಕ್ತಿ ಅದರ ಶಸ್ತ್ರಾಸ್ತ್ರಗಳಲ್ಲಿ ಅಥವಾ ಆರ್ಥಿಕ ಅಂಕಿಅಂಶಗಳಲ್ಲಿ ಅಲ್ಲ; ಅದರ ಶಿಕ್ಷಣ ಮತ್ತು ಸಾಂಸ್ಕೃತಿಕ ಚೇತನೆಯಲ್ಲಿ ಅಡಗಿದೆ. ಭಾರತವು ಜಗತ್ತಿಗೆ ತಕ್ಷಶಿಲಾ, ನಾಲಂದಾ ವಿಶ್ವವಿದ್ಯಾಲಯ ಮತ್ತು ವಿಕ್ರಮಶಿಲಾ ವಿಶ್ವವಿದ್ಯಾಲಯಗಳಂತಹ ಪರಂಪರೆಗಳನ್ನು ನೀಡಿದೆ. ಭೋಜಶಾಲೆ ಆ ವೈಭವಮಯ ಪರಂಪರೆಯ ಒಂದು ಕೊಂಡಿಯಾಗಿದೆ. ತಾಯಿ ಸರಸ್ವತಿಯ ಸಂದೇಶವೇ ಜ್ಞಾನವು ವಿನಯವನ್ನು ನೀಡುತ್ತದೆ ಮತ್ತು ವಿನಯವು ಸಮಾಜವನ್ನು ಒಂದಾಗಿಸುತ್ತದೆ ಎಂಬುದಾಗಿದೆ.

ವಾಷಿಂಗ್ಟನ್ನಲ್ಲಿ ನಿಂತಿರುವ ತಾಯಿ ಸರಸ್ವತಿಯ ಪ್ರತಿಮೆ ಮತ್ತು ಧಾರದ ಭೋಜಶಾಲೆಯ ಹೋರಾಟ ಎರಡೂ ಸೇರಿ ಒಂದೇ ಸಂದೇಶ ನೀಡುತ್ತಿರುವಂತಿವೆ — ತನ್ನ ಜ್ಞಾನ ಪರಂಪರೆಯನ್ನು ಉಳಿಸಿಕೊಳ್ಳುವ ನಾಗರಿಕತೆಯೇ ಜಗತ್ತಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಇಂದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿದ್ದರೂ ಇಂಡೋನೇಷ್ಯಾ ತನ್ನ ಸಾಂಸ್ಕೃತಿಕ ಬೇರುಗಳಿಗೆ ನಿಷ್ಠೆಯಿಂದ ಉಳಿದಿದೆ. ಅದೇ ರೀತಿಯಲ್ಲಿ ಭಾರತವೂ ತನ್ನ ಜ್ಞಾನ ಪರಂಪರೆಯನ್ನು ಗೌರವದಿಂದ ಉಳಿಸಿಕೊಳ್ಳಬೇಕಾಗಿದೆ. ಧಾರ ಭೋಜಶಾಲೆ ಕುರಿತು ಬಂದಿರುವ ನ್ಯಾಯಾಂಗ ತೀರ್ಪು ಅನೇಕ ವರ್ಷಗಳ ಬಳಿಕ ಸರಸ್ವತಿ ಭಕ್ತರಲ್ಲಿ ಹೊಸ ಸಂತೋಷ ಮೂಡಿಸಿದೆ; ನಿಶ್ಚಯವಾಗಿಯೂ ಇದು ಎಲ್ಲೆಡೆ ಸಂಭ್ರಮಿಸಬೇಕಾದ ಕ್ಷಣವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande