
ಬಾಗಲಕೋಟೆ, 07 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಎರಡನೇ ತಲೆಮಾರು ರಾಜಕಾರಣ ದಿನದಿಂದ ದಿನಕ್ಕೆ ಗಟ್ಟಿಗೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಪರಂಪರೆಯಿಂದಲೂ ಆದ್ಯತೆ ಇರುವ ಹಿನ್ನೆಲೆಯಲ್ಲಿ, ಹಿರಿಯ ನಾಯಕರ ವಾರಸುದಾರರು ಈಗ ಜಿಲ್ಲೆಯ ರಾಜಕೀಯದಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ.
ಈ ಕುರಿತು ಬಾಗಲಕೋಟೆ ನಗರದ ಪತ್ರಕರ್ತ ಸಿದ್ದು ಬೀಳಗಿ ಅವರ ವಿಶ್ಲೇಷಣಾ ವರದಿ ಪ್ರಕಾರ ಜಿಲ್ಲೆಯ ಏಳು ವಿಧಾನ ಸಭೆ ಕ್ಷೇತ್ರಗಳ ಪೈಕಿ ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಎರಡನೇ ತಲೆಮಾರಿನ ನಾಯಕತ್ವ ಸ್ಥಾಪಿತವಾಗಿತ್ತು. ಇದೀಗ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಭರ್ಜರಿ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಕ್ಷೇತ್ರಕ್ಕೂ ಕುಟುಂಬ ರಾಜಕಾರಣ ಕಾಲಿಟ್ಟಂತಾಗಿದೆ.
ನಾಲ್ಕನೇ ವಾರಸುದಾರರಾಗಿ ಉಮೇಶ ಮೇಟಿ, ಜಿಲ್ಲೆಯ ಹುನಗುಂದ ವಿಧಾನ ಸಭೆ ಕ್ಷೇತ್ರದಲ್ಲಿ ಮಾಜಿ ಸಚಿವ ದಿವಂಗತ ಎಸ್.ಆರ್. ಕಾಶಪ್ಪನವರ ಪುತ್ರ ವಿಜಯಾನಂದ ಕಾಶಪ್ಪನವರ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇದೀಗ ಬಾಗಲಕೋಟೆ ಉಪ ಚುನಾವಣೆಯಲ್ಲಿ ದಿವಂಗತ ಎಚ್.ವೈ. ಮೇಟಿ ಅವರ ಪುತ್ರ ಉಮೇಶ ಮೇಟಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಾಳೆಯದಲ್ಲಿ ಮತ್ತೊಂದು ರಾಜಕೀಯ ವಾರಸುದಾರಿಕೆ ಬಲ ಪಡೆದಿದೆ.
ಇದಕ್ಕೂ ಮೊದಲು ಜಮಖಂಡಿ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಸಿದ್ದು ನ್ಯಾಮಗೌಡರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರ ಆನಂದ ನ್ಯಾಮಗೌಡ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 2023ರ ಚುನಾವಣೆಯಲ್ಲಿ ಅವರು ಸೋಲು ಕಂಡರೂ, ಇಂದಿಗೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿದಿದ್ದಾರೆ.
ಹಳೆಯ ಕಾಲದಲ್ಲೇ ಆರಂಭವಾದ ಎರಡನೇ ತಲೆಮಾರು ರಾಜಕಾರಣ
ಹಾಗೆ ನೋಡಿದರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರ ಕಾಲದಲ್ಲಿಯೇ ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಕುಟುಂಬ ರಾಜಕಾರಣ ಮತ್ತು ಎರಡನೇ ತಲೆಮಾರು ನಾಯಕತ್ವಕ್ಕೆ ಬುನಾದಿ ಬಿದ್ದಿತ್ತು ಎನ್ನಲಾಗುತ್ತಿದೆ.
ಹಿರಿಯ ನಾಯಕರ ರಾಜಕೀಯ ಪ್ರಭಾವ ಹಾಗೂ ಸಂಘಟನೆ ಮೇಲಿನ ಹಿಡಿತದಿಂದ ಅವರ ವಾರಸುದಾರರು ಸುಲಭವಾಗಿ ರಾಜಕೀಯ ಪ್ರವೇಶ ಪಡೆಯುತ್ತಿದ್ದಾರೆ.
ಯುವ ನಾಯಕತ್ವದ ರೂಪದಲ್ಲಿ ಮತ್ತಷ್ಟು ವಿಸ್ತರಣೆ.
ಬಾಗಲಕೋಟೆ ಜಿಲ್ಲೆಯ ಇತರ ಕ್ಷೇತ್ರಗಳಲ್ಲಿಯೂ ಇದೇ ರಾಜಕೀಯ ಮಾದರಿ ವಿಸ್ತಾರವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಪುತ್ರ ವಿನಯ ತಿಮ್ಮಾಪುರ ಈಗಾಗಲೇ ಯುವ ಕಾಂಗ್ರೆಸ್ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.
ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನಷ್ಟು ಕ್ಷೇತ್ರಗಳಲ್ಲಿ ರಾಜಕೀಯ ವಾರಸುದಾರಿಕೆ ಮತ್ತಷ್ಟು ಬಲಪಡೆಯುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಜೋರಾಗಿವೆ.
ಬಿಜೆಪಿಯಲ್ಲೂ ಕುಟುಂಬ ರಾಜಕಾರಣ:
ಕುಟುಂಬ ರಾಜಕಾರಣದ ವಿಚಾರದಲ್ಲಿ ಬಿಜೆಪಿ ಕೂಡ ಹಿಂದೆ ಉಳಿದಿಲ್ಲ. ಬಾದಾಮಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರು ಸಹ ಎರಡನೇ ತಲೆಮಾರಿಗೆ ಸೇರಿದವರು. ಅವರ ತಂದೆಯವರೂ ಇದೇ ಕ್ಷೇತ್ರದ ಶಾಸಕರಾಗಿದ್ದರು. ಇದರಿಂದ ರಾಜಕೀಯ ಪಕ್ಷಗಳೆಲ್ಲವೂ ಕುಟುಂಬ ಆಧಾರಿತ ನಾಯಕತ್ವದತ್ತ ಸಾಗುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಚರ್ಚೆಗೆ ಗ್ರಾಸವಾದ ಸಿದ್ದರಾಮಯ್ಯ ಹೇಳಿಕೆ
ಬಾಗಲಕೋಟೆ ಉಪ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯೊಂದು ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. “ಈಗ ಉಮೇಶ ಮೇಟಿ ಅವರನ್ನು ಎರಡು ವರ್ಷದ ಅವಧಿಗೆ ಗೆಲ್ಲಿಸಿ, ಮುಂದಿನ 2028ರ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ನೀಡಲಾಗುವುದು” ಎಂದು ಅವರು ಬಹಿರಂಗ ವೇದಿಕೆಯಲ್ಲಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಪಕ್ಷದೊಳಗೆ ರಾಜಕೀಯ ವಾರಸುದಾರಿಕೆ ಕುರಿತ ಚರ್ಚೆ ಹುಟ್ಟುಹಾಕಿದರೂ, ಅದು ಯಾವುದೇ ಗಂಭೀರ ವಿರೋಧಕ್ಕೆ ಕಾರಣವಾಗಲಿಲ್ಲ. ಬದಲಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಾರಸುದಾರ ರಾಜಕಾರಣ ಈಗ ಸಹಜ ಪ್ರಕ್ರಿಯೆಯಾಗಿ ಸ್ವೀಕಾರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.
ಹೊಸಬರಿಗೆ ಅವಕಾಶ ಕ್ಷೀಣ?
ಒಟ್ಟಾರೆ ಬಾಗಲಕೋಟೆ ಜಿಲ್ಲೆಯ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಎರಡನೇ ತಲೆಮಾರಿನ ನಾಯಕತ್ವ ಬಲವಾಗುತ್ತಿರುವುದು ಸ್ಪಷ್ಟವಾಗಿದೆ. ಇದರಿಂದ ಪಕ್ಷದೊಳಗಿನ ಹೊಸ ಮುಖಗಳು ಹಾಗೂ ನೆಲಮಟ್ಟದಲ್ಲಿ ದುಡಿಯುವ ಕಾರ್ಯಕರ್ತರಿಗೆ ಅವಕಾಶಗಳು ಕ್ಷೀಣಿಸುತ್ತಿವೆ ಎಂಬ ಅಸಮಾಧಾನವೂ ಕೇಳಿಬರುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಕುಟುಂಬ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೊಸ ನಾಯಕತ್ವಕ್ಕೆ ಅವಕಾಶ ಸಿಗುವುದು ಕಷ್ಟಕರವಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ರಾಜಕೀಯ ಚಿತ್ರಣವೂ ಇದೇ ದಿಕ್ಕಿನಲ್ಲಿ ಸಾಗುತ್ತಿರುವುದು ಗಮನಾರ್ಹವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande