
ಬೆಂಗಳೂರು, 15 ಮೇ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಲಾ 3 ರೂ. ಏರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಲು ದೇಶದ ಜನಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಭಾರ ಹೇರಿದೆ ಎಂದು ಆರೋಪಿಸಿದ್ದಾರೆ.
“ಇದು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಲ್ಲ; ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿ” ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯ, ಕಳಪೆ ಆರ್ಥಿಕ ನಿರ್ವಹಣೆ ಹಾಗೂ ಹಣದುಬ್ಬರ ನಿಯಂತ್ರಣದಲ್ಲಿ ವಿಫಲವಾದ ಪರಿಣಾಮಗಳನ್ನು ಜನರ ಮೇಲೆ ಹೊರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 106 ರೂ. ದಾಟಿದ್ದು, ಡೀಸೆಲ್ ದರ 94 ರೂ. ತಲುಪಿದೆ ಎಂದು ಉಲ್ಲೇಖಿಸಿರುವ ಅವರು, ಇದರ ಪರಿಣಾಮ ಕೇವಲ ವಾಹನ ಸವಾರರಿಗಷ್ಟೇ ಸೀಮಿತವಾಗುವುದಿಲ್ಲ ಎಂದಿದ್ದಾರೆ. ಸಾರಿಗೆ ವೆಚ್ಚ ಹೆಚ್ಚಳದಿಂದ ತರಕಾರಿ, ಹಣ್ಣು, ಹಾಲು ಸೇರಿದಂತೆ ಪ್ರತಿಯೊಂದು ದಿನಬಳಕೆಯ ವಸ್ತುಗಳ ದರ ಏರಿಕೆಯಾಗಲಿದ್ದು, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಮಹಿಳೆಯರು ಹಾಗೂ ಮಧ್ಯಮ ವರ್ಗದ ಜನರ ಬದುಕು ಮತ್ತಷ್ಟು ದುಸ್ತರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗಿದ್ದಾಗ ಅದರ ಲಾಭವನ್ನು ಕೇಂದ್ರ ಸರ್ಕಾರ ಜನತೆಗೆ ನೀಡಲಿಲ್ಲ. ಆಗಲೂ ತೆರಿಗೆ ಸಂಗ್ರಹಿಸಿ ಸರ್ಕಾರದ ಬೊಕ್ಕಸ ತುಂಬಿಸಿಕೊಂಡಿತ್ತು. ಈಗ ದರ ಏರಿಕೆಯಾಗುತ್ತಿದ್ದಂತೆ ಅದರ ಸಂಪೂರ್ಣ ಭಾರವನ್ನು ಜನರ ಮೇಲೆಯೇ ಹಾಕಲಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಹಣದುಬ್ಬರ ನಿಯಂತ್ರಣದಲ್ಲಿ, ರೂಪಾಯಿ ಮೌಲ್ಯ ಕುಸಿತ ತಡೆಯುವಲ್ಲಿ ಹಾಗೂ ದೇಶದ ಆರ್ಥಿಕ ನಿರ್ವಹಣೆಯಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿರುವ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಉದ್ಯಮಿ ಮಿತ್ರರ ಬಗ್ಗೆ ತೋರಿಸುವ ಕಾಳಜಿ ಮತ್ತು ಬದ್ಧತೆಯಲ್ಲಿ ಸ್ವಲ್ಪವಾದರೂ ದೇಶದ ಜನರ ಬಗ್ಗೆ ತೋರಿಸಲಿ” ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಜನವಿರೋಧಿ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಸಿದ್ದರಾಮಯ್ಯ, ನಿರಂತರವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯ, ಆರ್ಥಿಕ ವೈಫಲ್ಯ ಹಾಗೂ ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಹೊಣೆಯನ್ನು ಹೊತ್ತು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.