ಭಾರತ–ಆಫ್ರಿಕಾ ಸಂಬಂಧಗಳಿಗೆ ಹೊಸ ದಿಕ್ಕು
ಜಾಗತಿಕ ದಕ್ಷಿಣದ ಧ್ವನಿಯನ್ನು ಬಲಪಡಿಸುವ ಐತಿಹಾಸಿಕ ಸಹಭಾಗಿತ್ವ” – ರಾಯಭಾರಿ ಅನಿಲ್ ಕುಮಾರ್ ರೈ
ಅನಿಲ್ ಕುಮಾರ ರೈ


ನವದೆಹಲಿ, 15 ಮೇ (ಹಿ.ಸ.) :

ಆ್ಯಂಕರ್ :

ಜಾಗತಿಕ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಬಹುಧ್ರುವೀಯ ಹಾಗೂ ಸಮಾವೇಶಾತ್ಮಕ ದಿಕ್ಕಿನತ್ತ ಸಾಗುತ್ತಿರುವ ಸಂದರ್ಭದಲ್ಲಿ, ಭಾರತ ಮತ್ತು ಆಫ್ರಿಕಾ ಖಂಡದ ನಡುವಿನ ಸಂಬಂಧಗಳು ಹೊಸ ರೂಪ ಪಡೆದುಕೊಳ್ಳುತ್ತಿವೆ. ವಸಾಹತುಶಾಹಿ ವಿರುದ್ಧದ ಹೋರಾಟದ ಐತಿಹಾಸಿಕ ಬಾಂಧವ್ಯವನ್ನು ಮೀರಿ, ಇಂದಿನ ಭಾರತ–ಆಫ್ರಿಕಾ ಸಹಭಾಗಿತ್ವವು ತಂತ್ರಜ್ಞಾನ, ಡಿಜಿಟಲ್ ಪರಿವರ್ತನೆ, ಆರೋಗ್ಯ, ಶಿಕ್ಷಣ, ವ್ಯಾಪಾರ ಮತ್ತು ತಂತ್ರಾತ್ಮಕ ಸಹಕಾರದ ಹೊಸ ಅಧ್ಯಾಯವನ್ನು ಆರಂಭಿಸಿದೆ.

ಈ ಕುರಿತು ಹಿಂದುಸ್ಥಾನ್ ಸಮಾಚಾರಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಇಥಿಯೋಪಿಯಾದಲ್ಲಿನ ಭಾರತದ ರಾಯಭಾರಿ ಹಾಗೂ ಆಫ್ರಿಕಾ ಒಕ್ಕೂಟದ ಶಾಶ್ವತ ಪ್ರತಿನಿಧಿಯಾಗಿರುವ ಅನಿಲ್ ಕುಮಾರ್ ರೈ, ಭಾರತ–ಆಫ್ರಿಕಾ ಸಂಬಂಧಗಳ ಭವಿಷ್ಯದ ಕುರಿತು ಸಮಗ್ರ ಚಿತ್ರಣ ನೀಡಿದ್ದಾರೆ. ಮೇ 28ರಿಂದ 31ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ನಾಲ್ಕನೇ ಭಾರತ–ಆಫ್ರಿಕಾ ವೇದಿಕೆ ಶೃಂಗಸಭೆ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.

ಭಾರತ ಮತ್ತು ಆಫ್ರಿಕಾ ನಡುವಿನ ದಶಕಗಳ ರಾಜತಾಂತ್ರಿಕ ಸ್ನೇಹವನ್ನು ಈಗ ನೇರ ಜನಹಿತಕಾರಿ ಯೋಜನೆಗಳಾಗಿ ರೂಪಿಸುವ ಸಮಯ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

“ಪರಿವರ್ತನೆಯ ಹೊಸ ಅಧ್ಯಾಯಕ್ಕೆ ಕಾಲಿಟ್ಟ ಭಾರತ–ಆಫ್ರಿಕಾ ಸಂಬಂಧ”

ಭಾರತ ಮತ್ತು ಆಫ್ರಿಕಾ ದೇಶಗಳು ಇಂದು “ಪರಿವರ್ತನೆಯ ಹೊಸ ಅಧ್ಯಾಯ”ಕ್ಕೆ ಪ್ರವೇಶಿಸುತ್ತಿವೆ ಎಂದು ರಾಯಭಾರಿ ರೈ ಹೇಳಿದರು. ದಕ್ಷಿಣ–ದಕ್ಷಿಣ ಸಹಕಾರ, ಜನರಿಂದ ಜನರಿಗೆ ಇರುವ ಸಂಬಂಧ ಮತ್ತು ಅಭಿವೃದ್ಧಿಯ ಸಾಮಾನ್ಯ ಗುರಿಗಳು ಈ ಸಹಭಾಗಿತ್ವದ ಪ್ರಮುಖ ಅಡಿಪಾಯಗಳಾಗಿವೆ ಎಂದರು.

ಇನ್ನು ಈ ಸಂಬಂಧವು ಕೇವಲ ರಾಜತಾಂತ್ರಿಕ ಮಟ್ಟಕ್ಕೆ ಸೀಮಿತವಾಗದೆ, ತಂತ್ರಜ್ಞಾನ, ಆರೋಗ್ಯ, ಕೃಷಿ, ಶಿಕ್ಷಣ, ವ್ಯಾಪಾರ ಮತ್ತು ನವೀನತೆಯ ಕ್ಷೇತ್ರಗಳವರೆಗೂ ವಿಸ್ತರಿಸಿದೆ ಎಂದು ಅವರು ಹೇಳಿದರು.

ಮೇ 28ರಿಂದ ನಾಲ್ಕನೇ ಭಾರತ–ಆಫ್ರಿಕಾ ಶೃಂಗಸಭೆ

ನವದೆಹಲಿಯಲ್ಲಿ ನಡೆಯಲಿರುವ ನಾಲ್ಕನೇ ಭಾರತ–ಆಫ್ರಿಕಾ ವೇದಿಕೆ ಶೃಂಗಸಭೆಯನ್ನು ಭಾರತ ಸರ್ಕಾರ ಮತ್ತು ಆಫ್ರಿಕಾ ಒಕ್ಕೂಟ ಆಯೋಗ ಸಂಯುಕ್ತವಾಗಿ ಆಯೋಜಿಸುತ್ತಿವೆ.

ಈ ಶೃಂಗಸಭೆಯಲ್ಲಿ ಆಫ್ರಿಕಾ ಖಂಡದ ಹಲವು ರಾಷ್ಟ್ರಗಳ ನಾಯಕರು, ಪ್ರಾದೇಶಿಕ ಆರ್ಥಿಕ ಸಂಘಟನೆಗಳು, ತಜ್ಞ ಸಂಸ್ಥೆಗಳು ಹಾಗೂ ಭಾರತೀಯ ಮತ್ತು ಆಫ್ರಿಕಾ ಮೂಲದ ವಲಸಿಗ ಸಮುದಾಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಡಿಜಿಟಲ್ ತಂತ್ರಜ್ಞಾನ, ಕೃಷಿ, ಆರೋಗ್ಯ, ವ್ಯಾಪಾರ, ನವೀನತೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಸ್ಪಷ್ಟ ಕಾರ್ಯಯೋಜನೆ ರೂಪಿಸುವುದು ಶೃಂಗಸಭೆಯ ಮುಖ್ಯ ಉದ್ದೇಶವಾಗಿದೆ.

ಶೃಂಗಸಭೆಗೆ ಮುನ್ನ ಚಿಂತಕರ ಸಮಾಲೋಚನೆ ನಡೆಯಲಿದ್ದು, ಭಾರತ–ಆಫ್ರಿಕಾ ವ್ಯವಹಾರ ಸಂವಾದ, ನೀತಿ ಕಾರ್ಯಾಗಾರಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುತ್ತಿದೆ.

ಈ ಬಾರಿ ಶೃಂಗಸಭೆಯ ಧ್ಯೇಯವಾಕ್ಯವಾಗಿ ಎಐ ಸ್ಪಿರಿಟ್ ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ಸಮಗ್ರ ಪರಿವರ್ತನೆಗಾಗಿ ಭಾರತ-ಆಫ್ರಿಕಾ ಕಾರ್ಯತಂತ್ರದ ಪಾಲುದಾರಿಕೆ”

ಎಂದು ನಿಗದಿಪಡಿಸಲಾಗಿದೆ.

ಅಂದರೆ, ಕೇವಲ ಮಾತುಕತೆಗಳ ಮಟ್ಟದಲ್ಲೇ ಉಳಿಯದೆ, ನೇರ ಅಭಿವೃದ್ಧಿ ಮತ್ತು ಸಮಾವೇಶಾತ್ಮಕ ಪರಿವರ್ತನೆಗೆ ಒತ್ತು ನೀಡುವ ಸಹಭಾಗಿತ್ವವನ್ನು ನಿರ್ಮಿಸುವುದು ಇದರ ಗುರಿಯಾಗಿದೆ.

ಆಫ್ರಿಕಾ ಖಂಡದ ದೀರ್ಘಕಾಲೀನ ಅಭಿವೃದ್ಧಿ ರೂಪರೇಖೆಯಾಗಿರುವ “ಕಾರ್ಯಸೂಚಿ 2063 - ನಮಗೆ ಬೇಕಾದ ಆಫ್ರಿಕಾ ಗೆ ಭಾರತ ತನ್ನ ಅಭಿವೃದ್ಧಿ ಮಾದರಿಯನ್ನು ಹೊಂದಿಸಿಕೊಳ್ಳುತ್ತಿದೆ ಎಂದು ರಾಯಭಾರಿ ರೈ ಹೇಳಿದರು.

ಇದೇ ವೇಳೆ ಭಾರತದ “ವಿಕಸಿತ ಭಾರತ 2047” ದೃಷ್ಟಿಕೋನವೂ ಆಫ್ರಿಕಾ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಅವರು ತಿಳಿಸಿದರು.

ಭಾರತದ ಜನಸಂಖ್ಯಾ ಆಧಾರಿತ ಪರಿಹಾರ ಮಾದರಿಗಳು ಆಫ್ರಿಕಾ ರಾಷ್ಟ್ರಗಳಿಗೆ ಸಹಕಾರಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ಶೃಂಗಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಲು ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳು “ಸಂಯುಕ್ತ ಮೇಲ್ವಿಚಾರಣೆ ಮತ್ತು ಅನುಷ್ಠಾನ ವ್ಯವಸ್ಥೆ” ಸ್ಥಾಪನೆಗೆ ಚಿಂತನೆ ನಡೆಸುತ್ತಿವೆ.

ಈ ವ್ಯವಸ್ಥೆಯಡಿ ಸ್ಪಷ್ಟ ಗುರಿ ನಿಗದಿ, ನಿಯಮಿತ ಪರಿಶೀಲನಾ ಸಭೆಗಳು ಮತ್ತು ಯೋಜನೆಗಳ ಪ್ರಗತಿ ಮೇಲ್ವಿಚಾರಣೆ ನಡೆಯಲಿದ್ದು, ಇದರಿಂದ ಪಾರದರ್ಶಕತೆ ಮತ್ತು ಉತ್ತರದಾಯಕತೆ ಹೆಚ್ಚಲಿದೆ ಎಂದು ರಾಯಭಾರಿ ಹೇಳಿದರು.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರವನ್ನು ಭಾರತ–ಆಫ್ರಿಕಾ ಸಹಕಾರದ ಅತ್ಯಂತ ಮಹತ್ವದ ಕ್ಷೇತ್ರವೆಂದು ಗುರುತಿಸಲಾಗಿದ್ದು, ಭಾರತದ ಡಿಜಿಟಲ್ ಗುರುತಿನ ವ್ಯವಸ್ಥೆ, ಹಣಕಾಸು ಸೇವೆಗಳು, ಆರೋಗ್ಯ ಮತ್ತು ಶಿಕ್ಷಣ ಆಧಾರಿತ ಡಿಜಿಟಲ್ ವ್ಯವಸ್ಥೆಗಳು ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸಿವೆ ಎಂದು ಅವರು ವಿವರಿಸಿದರು.

ಭಾರತದ ಡಿಜಿಟಲ್ ವ್ಯವಸ್ಥೆಯ ಪ್ರಮುಖ ವೈಶಿಷ್ಟ್ಯವೆಂದರೆ ಅದು “ಓಪನ್ ಸೋರ್ಸ್” ಆಗಿರುವುದು. ಇದರಿಂದ ರಾಷ್ಟ್ರಗಳು ತಮ್ಮದೇ ಅಗತ್ಯಗಳಿಗೆ ಅನುಗುಣವಾಗಿ ವ್ಯವಸ್ಥೆಯನ್ನು ರೂಪಿಸಿಕೊಳ್ಳಬಹುದು ಮತ್ತು ಡೇಟಾ ಸ್ವಾಯತ್ತತೆಯನ್ನೂ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2018ರಲ್ಲಿ ಉಗಾಂಡಾ ಸಂಸತ್ತಿನಲ್ಲಿ ಮಂಡಿಸಿದ “ಕಂಪಾಲಾ ತತ್ವಗಳು” ಭಾರತ–ಆಫ್ರಿಕಾ ಸಂಬಂಧಗಳಿಗೆ ಮಾರ್ಗದರ್ಶಕವಾಗಿವೆ ಎಂದು ರಾಯಭಾರಿ ರೈ ತಿಳಿಸಿದರು. ಈ ತತ್ವಗಳು ಸಮಾನತೆ, ಪರಸ್ಪರ ಗೌರವ, ಏಕತೆ ಮತ್ತು ಆಫ್ರಿಕಾ ಆದ್ಯತೆಗಳ ಆಧಾರದ ಮೇಲೆ ಸಹಭಾಗಿತ್ವ ನಿರ್ಮಾಣಕ್ಕೆ ಒತ್ತು ನೀಡುತ್ತವೆ ಎಂದರು.

2023ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಆಫ್ರಿಕಾ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವ ನೀಡಲು ಭಾರತ ಬಲವಾದ ಬೆಂಬಲ ನೀಡಿತ್ತು, ಇದು ಜಾಗತಿಕ ದಕ್ಷಿಣದ ಧ್ವನಿಯನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ತೋರಿಸುತ್ತದೆ ಎಂದು ರಾಯಭಾರಿ ರೈ ಹೇಳಿದರು.

ಮುಂದಿನ ದಿನಗಳಲ್ಲಿ ಭಾರತ–ಆಫ್ರಿಕಾ ಸಹಭಾಗಿತ್ವವು ಡಿಜಿಟಲ್ ಮೂಲಸೌಕರ್ಯ, ಫಿನ್ಟೆಕ್, ಕೃತಕ ಬುದ್ಧಿಮತ್ತೆ, ಕೈಗಾರಿಕೀಕರಣ, ನವೀಕರಿಸಬಹುದಾದ ಇಂಧನ, ಆರೋಗ್ಯ, ಟೆಲಿಮೆಡಿಸಿನ್, ಶಿಕ್ಷಣ, ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಸೃಜನಾತ್ಮಕ ಕೈಗಾರಿಕೆಗಳತ್ತ ಹೆಚ್ಚಿನ ಒತ್ತು ನೀಡಲಿದೆ ಎಂದು ಅವರು ಹೇಳಿದರು.

ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತ–ಆಫ್ರಿಕಾ ಸಂಬಂಧಗಳು ಸ್ಥಿರತೆ, ನಂಬಿಕೆ ಮತ್ತು ಪರಸ್ಪರ ಗೌರವದ ಸಂಕೇತವಾಗಿ ಬೆಳೆಯುತ್ತಿವೆ ಎಂದು ರಾಯಭಾರಿ ಅನಿಲ್ ಕುಮಾರ್ ರೈ ಅಭಿಪ್ರಾಯಪಟ್ಟರು.

ಇತ್ತೀಚಿನ ವರ್ಷಗಳಲ್ಲಿ ಭಾರತವು ಆಫ್ರಿಕಾ ಖಂಡದಲ್ಲಿ 17 ಹೊಸ ರಾಜತಾಂತ್ರಿಕ ಕಚೇರಿಗಳನ್ನು ಆರಂಭಿಸಿರುವುದನ್ನೂ ಅವರು ಉಲ್ಲೇಖಿಸಿದರು. ಭಾರತ ಮತ್ತು ಆಫ್ರಿಕಾ ನಡುವಿನ ಸಂಬಂಧ ಈಗ ಕೇವಲ ದ್ವಿಪಕ್ಷೀಯ ಸಹಕಾರವಲ್ಲ ಸಮತೋಲನಯುತ ಮತ್ತು ಸಮಾವೇಶಾತ್ಮಕ ಜಾಗತಿಕ ವ್ಯವಸ್ಥೆ ನಿರ್ಮಾಣಕ್ಕೆ ಸಹಕಾರಿಯಾಗುವ ಮಹತ್ವದ ಜಾಗತಿಕ ಪಾಲುದಾರಿಕೆಯಾಗುತ್ತಿದೆ ಎಂದು ಅನಿಲ್ ಕುಮಾರ ರೈ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande