ದೆಹಲಿಯಲ್ಲಿ ಹೈಡ್ರೋಜನ್ ಚಾಲಿತ ಶಟಲ್ ಬಸ್ ಸೇವೆ ಆರಂಭ
ನವದೆಹಲಿ, 15 ಮೇ (ಹಿ.ಸ.) : ಆ್ಯಂಕರ್ : ರಾಜಧಾನಿ ದೆಹಲಿಯಲ್ಲಿ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದೆಹಲಿ ಮೆಟ್ರೋ ರೈಲು ನಿಗಮವು ಹೈಡ್ರೋಜನ್ ಚಾಲಿತ ಇಂಟಿಗ್ರೇಟೆಡ್ ಶಟಲ್ ಬಸ್ ಸೇವೆಯನ್ನು ಆರಂಭಿಸಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚ
Hydrogen-Shuttle-Bus-Service


ನವದೆಹಲಿ, 15 ಮೇ (ಹಿ.ಸ.) :

ಆ್ಯಂಕರ್ : ರಾಜಧಾನಿ ದೆಹಲಿಯಲ್ಲಿ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದೆಹಲಿ ಮೆಟ್ರೋ ರೈಲು ನಿಗಮವು ಹೈಡ್ರೋಜನ್ ಚಾಲಿತ ಇಂಟಿಗ್ರೇಟೆಡ್ ಶಟಲ್ ಬಸ್ ಸೇವೆಯನ್ನು ಆರಂಭಿಸಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದಲ್ಲಿ ಈ ಸೇವೆಗೆ ಶುಕ್ರವಾರ ಚಾಲನೆ ನೀಡಲಾಗಿದೆ.

ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣದಲ್ಲಿ ಬೆಳಿಗ್ಗೆ 8:30ಕ್ಕೆ ಮೊದಲ ಎರಡು ಹೈಡ್ರೋಜನ್ ಚಾಲಿತ ಬಸ್ಗಳಿಗೆ ಹಸಿರು ನಿಶಾನೆ ತೋರಿಸಲಾಯಿತು.

ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ನಿರ್ದೇಶಕ ಅರವಿಂದ್ ಕುಮಾರ್ ಅವರು ಡಿಎಂಆರ್ಸಿಯ ನಿರ್ದೇಶಕ ಡಾ. ಅಮಿತ್ ಕುಮಾರ್ ಜೈನ್ ಅವರಿಗೆ ಬಸ್ಗಳ ಕೀಲಿಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ನೂತನ ಬಸ್ ಗಳು 35 ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿದ್ದು, ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಒಳಗೊಂಡಿವೆ.

ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾಗಳು ಹಾಗೂ ನೈಜ ಸಮಯದ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ಸಮಯಪಾಲನೆಗೆ ವಿಶೇಷ ಆದ್ಯತೆ ನೀಡಲಾಗಿದೆ.

ಈ ಶಟಲ್ ಸೇವೆ ವಾರದ ಕೆಲಸದ ದಿನಗಳಲ್ಲಿ, ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯ ನಿರ್ವಹಿಸಲಿದೆ. ಬೆಳಿಗ್ಗೆ 8:30ರಿಂದ ಮಧ್ಯಾಹ್ನ 12:30ರವರೆಗೆ ಹಾಗೂ ಮಧ್ಯಾಹ್ನ 3:30ರಿಂದ ಸಂಜೆ 6:30ರವರೆಗೆ ಸೇವೆ ಲಭ್ಯವಿರುತ್ತದೆ. ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ ಸಂಚಾರ ಇರಲಿದೆ ಎಂದು ಡಿಎಂಆರ್ಸಿ ತಿಳಿಸಿದೆ.

ಈ ಬಸ್ ಸೇವೆಯು ದೆಹಲಿಯ ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲಿದೆ. ಕರ್ತವ್ಯ ಭವನ, ವಿಜ್ಞಾನ ಭವನ, ನಿರ್ಮಾಣ ಭವನ, ಅಕ್ಬರ್ ರಸ್ತೆ, ಬರೋಡಾ ಹೌಸ್, ರಾಷ್ಟ್ರೀಯ ಕ್ರೀಡಾಂಗಣ, ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ, ಇಂಡಿಯಾ ಗೇಟ್ ಹಾಗೂ ಸೇವಾ ತೀರ್ಥ ಮೆಟ್ರೋ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿಗೆ ಈ ಬಸ್ ಸಂಚಾರ ಕಲ್ಪಿಸಲಾಗಿದೆ.

ಪ್ರಯಾಣ ದರವನ್ನು ₹10 ಮತ್ತು ₹15 ಎಂದು ಹಂತವಾರು ನಿಗದಿಪಡಿಸಲಾಗಿದೆ. ಬಸ್ ಕಾರ್ಯಾಚರಣೆ, ಟಿಕೆಟ್ ವಿತರಣೆ ಹಾಗೂ ಪ್ರಯಾಣಿಕರ ಸೇವೆಗಳ ಜವಾಬ್ದಾರಿಯನ್ನು ಡಿಎಂಆರ್ಸಿ ವಹಿಸಿಕೊಂಡಿದ್ದು, ಹೈಡ್ರೋಜನ್ ಇಂಧನ ಪೂರೈಕೆ ಮತ್ತು ಚಾಲಕರ ವ್ಯವಸ್ಥೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿರ್ವಹಿಸಲಿದೆ.

ಹೈಡ್ರೋಜನ್ ಇಂಧನ ಆಧಾರಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಈ ಉಪಕ್ರಮವು ಪರಿಸರ ಸಂರಕ್ಷಣೆ, ಹಸಿರು ಚಲನಶೀಲತೆ ಮತ್ತು ಸುಸ್ಥಿರ ನಗರಾಭಿವೃದ್ಧಿಯತ್ತ ಕೇಂದ್ರ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಒತ್ತಿ ಹೇಳಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande