
ನವದೆಹಲಿ, 15 ಮೇ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ಇಂಧನ ಬಿಕ್ಕಟ್ಟಿನ ಜೊತೆಗೆ ದೇಶದ ಆರ್ಥಿಕ ಸಂಕಷ್ಟಕ್ಕೆ ಪ್ರಮುಖ ಕಾರಣ ಮೋದಿ ಸರ್ಕಾರದ ನಾಯಕತ್ವದ ವೈಫಲ್ಯ, ದೂರದೃಷ್ಟಿಯ ಕೊರತೆ ಮತ್ತು ಅಸಮರ್ಥ ಆಡಳಿತ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಇಂಧನ ದರ ಏರಿಕೆ ಹಾಗೂ ಹಣದುಬ್ಬರದಿಂದ ಜನತೆ ಸಂಕಷ್ಟಕ್ಕೆ ಸಿಲುಕಿರುವ ಪರಿಸ್ಥಿತಿಯನ್ನು “ಮೋದಿ ಸರ್ಕಾರ ನಿರ್ಮಿತ ಬಿಕ್ಕಟ್ಟು” ಎಂದು ಖರ್ಗೆ ಆರೋಪಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರ ಏರಿಕೆಯ ಹೊರೆ ನೇರವಾಗಿ ಸಾರ್ವಜನಿಕರ ಮೇಲಿದೆ ಎಂದು ಹೇಳಿರುವ ಅವರು, ವಿಶೇಷವಾಗಿ ಡೀಸೆಲ್ ಬೆಲೆ ಏರಿಕೆಯಿಂದ ದೇಶಾದ್ಯಂತ ಹಣದುಬ್ಬರ ಹೆಚ್ಚಳವಾಗುತ್ತದೆ. ಇದರಿಂದ ಕೈಗಾರಿಕೆಗಳು, ರೈತರು ಹಾಗೂ ಸಾಮಾನ್ಯ ಕುಟುಂಬಗಳ ಬಜೆಟ್ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದ ಯುದ್ಧ ಆರಂಭವಾದಾಗ ಕೇಂದ್ರ ಸರ್ಕಾರ “ಎಲ್ಲವೂ ಚೆನ್ನಾಗಿದೆ” ಎಂದು ಜನರನ್ನು ನಂಬಿಸಲು ಯತ್ನಿಸಿತು. ಆದರೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಖರ್ಗೆ ಟೀಕಿಸಿದ್ದಾರೆ. ಭಾರತದ ಸಾರ್ವಭೌಮತ್ವವನ್ನು ಅಮೆರಿಕದ “ಅನುಮತಿ” ಮತ್ತು “ಭತ್ಯೆ”ಗೆ ಅಡಮಾನ ಇಡಲಾಗಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.
ಚುನಾವಣೆ ಸಮಯದಲ್ಲಿ ಮಾತ್ರ ಸರ್ಕಾರ ಎಲ್ಲವೂ ಸಾಮಾನ್ಯವಾಗಿದೆ ಎಂಬಂತೆ ವರ್ತಿಸುತ್ತದೆ. ಆದರೆ ಬಿಕ್ಕಟ್ಟು ಗಂಭೀರವಾಗುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ “ಮನೆಯಿಂದ ಕೆಲಸ ಮಾಡಿ, ಇಂಧನ ಉಳಿಸಿ” ಎಂಬ ಸಲಹೆ ನೀಡುತ್ತಿರುವುದು ಜನರ ಆತಂಕ ಹೆಚ್ಚಿಸಿದೆ ಎಂದು ಖರ್ಗೆ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಎರಡು ಪ್ರಶ್ನೆಗಳನ್ನು ಖರ್ಗೆ ಮುಂದಿಟ್ಟಿದ್ದಾರೆ. ರಷ್ಯಾದ ತೈಲ ಖರೀದಿಗೆ ಅಮೆರಿಕ ನೀಡಿದ್ದ 30 ದಿನಗಳ ವಿನಾಯಿತಿಯನ್ನು ವಿಸ್ತರಿಸಲು ಭಾರತ ಸರ್ಕಾರ “ಅನುಮತಿ” ಕೇಳಬೇಕಾದ ಪರಿಸ್ಥಿತಿ ಏಕೆ ಬಂದಿದೆ ಎಂದು ಪ್ರಶ್ನಿಸಿದ್ದಾರೆ.
ಅದೇ ರೀತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದ ಸಮಯದಲ್ಲಿ ಸಾರ್ವಜನಿಕರಿಗೆ ಯಾವುದೇ ಪರಿಹಾರ ನೀಡದೆ, ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ₹43 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ಹಾಗಿದ್ದರೂ ಈಗ ಸಾರ್ವಜನಿಕರ ಮೇಲೆ ಹಣದುಬ್ಬರದ ಹೊರೆ ಏಕೆ ಹಾಕಲಾಗುತ್ತಿದೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.