ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ನೀಟ್ ಪರೀಕ್ಷೆ : ಧರ್ಮೇಂದ್ರ ಪ್ರಧಾನ್
ನವದೆಹಲಿ, 15 ಮೇ (ಹಿ.ಸ.) : ಆ್ಯಂಕರ್ : ಮುಂದಿನ ವರ್ಷದಿಂದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್)ಯನ್ನು ಸಂಪೂರ್ಣ ಕಂಪ್ಯೂಟರ್ ಆಧಾರಿತ ವಿಧಾನದಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ನವದೆಹಲಿಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರ
Pradhan


ನವದೆಹಲಿ, 15 ಮೇ (ಹಿ.ಸ.) :

ಆ್ಯಂಕರ್ : ಮುಂದಿನ ವರ್ಷದಿಂದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್)ಯನ್ನು ಸಂಪೂರ್ಣ ಕಂಪ್ಯೂಟರ್ ಆಧಾರಿತ ವಿಧಾನದಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ನವದೆಹಲಿಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಯ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಸ್ವೀಕರಿಸುತ್ತಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿ ಕಂಡುಬಂದ ದೋಷಗಳನ್ನು ತಕ್ಷಣ ಸರಿಪಡಿಸಲಾಗುವುದು ಎಂದು ಹೇಳಿದರು.

ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ಈಗಾಗಲೇ ರದ್ದುಗೊಳಿಸಲಾಗಿದ್ದು, ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಮುಂದಿನ ವರ್ಷದಿಂದ ಇಂತಹ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಮಾದರಿಯಲ್ಲಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪರೀಕ್ಷೆ ನಡೆದ ಕೆಲವೇ ದಿನಗಳಲ್ಲಿ, ಅಂದರೆ ಮೇ 7ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಹಲವು ದೂರುಗಳು ಬಂದಿದ್ದವು. ಕೆಲವು ಪ್ರದೇಶಗಳಲ್ಲಿ ಪರೀಕ್ಷೆಗೆ ಮುನ್ನ ಹಂಚಲಾಗಿದ್ದ “ಗೆಸ್ ಪೇಪರ್”ಗಳಲ್ಲಿ ನಿಜವಾದ ಪ್ರಶ್ನೆಪತ್ರಿಕೆಯ ಹೆಚ್ಚಿನ ಪ್ರಶ್ನೆಗಳು ಕಾಣಿಸಿಕೊಂಡಿದ್ದವು ಎಂಬ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆ ಕೇಂದ್ರ ಉನ್ನತ ಶಿಕ್ಷಣ ಇಲಾಖೆ ತುರ್ತು ತನಿಖೆ ಆರಂಭಿಸಿ, ವಿವಿಧ ರಾಜ್ಯಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿತು. ಮೇ 12ರಂದು “ಗೆಸ್ ಪೇಪರ್” ಹೆಸರಿನಲ್ಲಿ ಮೂಲ ಪ್ರಶ್ನೆಪತ್ರಿಕೆಯೇ ಸೋರಿಕೆಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಮೇ 13ರಂದು ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಚಿವರು ವಿವರಿಸಿದರು.

“ಪರೀಕ್ಷಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿಚಾರದಲ್ಲಿ ಸರ್ಕಾರ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳ ಭವಿಷ್ಯ ಹಾಗೂ ಹಕ್ಕುಗಳಿಗೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ. ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪರೀಕ್ಷಾ ಮಾಫಿಯಾದ ವಿರುದ್ಧ ಸಮಗ್ರ ಹೋರಾಟ ಆರಂಭಿಸಲಾಗುವುದು” ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಹಾಗೂ ಗೊಂದಲಕಾರಿ ಮಾಹಿತಿಗಳು ಹರಡುತ್ತಿರುವುದರ ಮೇಲೂ ಅವರು ಆತಂಕ ವ್ಯಕ್ತಪಡಿಸಿದರು. ಪ್ರಕರಣವನ್ನು ಈಗಾಗಲೇ ಸಿಬಿಐ ತನಿಖೆಗೆ ಒಪ್ಪಿಸಲಾಗಿದ್ದು, ಸಮಗ್ರ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande