
ನವದೆಹಲಿ, 14 ಮೇ (ಹಿ.ಸ.) :
ಆ್ಯಂಕರ್ : ಜಾಗತಿಕ ಸಂಘರ್ಷಗಳು, ಆರ್ಥಿಕ ಅಸ್ಥಿರತೆ, ವ್ಯಾಪಾರ ಅಡೆತಡೆಗಳು ಹಾಗೂ ಭೌಗೋಳಿಕ ಅನಿಶ್ಚಿತತೆಗಳ ನಡುವೆ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಒಗ್ಗಟ್ಟು ಅತ್ಯಂತ ಮಹತ್ವದ್ದಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಎರಡು ದಿನಗಳ ಬ್ರಿಕ್ಸ್ ವಿದೇಶಾಂಗ ಮಂತ್ರಿಗಳ ಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಉದಯೋನ್ಮುಖ ಆರ್ಥಿಕತೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿವೆ ಎಂದು ಹೇಳಿದರು.
“ಜಗತ್ತು ಅಪೂರ್ವ ಭೌಗೋಳಿಕ ಹಾಗೂ ಆರ್ಥಿಕ ಅನಿಶ್ಚಿತತೆಯ ಹಂತವನ್ನು ಎದುರಿಸುತ್ತಿದೆ. ಸಂಘರ್ಷಗಳು, ಹವಾಮಾನ ಬದಲಾವಣೆ ಮತ್ತು ಕೋವಿಡ್-19 ಸಾಂಕ್ರಾಮಿಕದ ಪರಿಣಾಮಗಳು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿವೆ” ಎಂದು ಅವರು ತಿಳಿಸಿದರು.
ಇಂಧನ, ಆಹಾರ ಮತ್ತು ರಸಗೊಬ್ಬರ ಭದ್ರತೆ ಮೇಲೂ ಈ ಬೆಳವಣಿಗೆಗಳು ದುಷ್ಪರಿಣಾಮ ಬೀರಿವೆ. ಪೂರೈಕೆ ಸರಪಳಿ ವ್ಯತ್ಯಯ, ಏರಿಕೆಯಾಗುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯ ಕುಂಠಿತ ನಿರೀಕ್ಷೆಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿವೆ ಎಂದು ಹೇಳಿದರು.
ಬ್ರಿಕ್ಸ್ ರಾಷ್ಟ್ರಗಳು ವಿಶ್ವಾಸಾರ್ಹ ಪೂರೈಕೆ ಸರಪಳಿಗಳು ಮತ್ತು ವೈವಿಧ್ಯಮಯ ಮಾರುಕಟ್ಟೆಗಳ ನಿರ್ಮಾಣದತ್ತ ಗಮನಹರಿಸಬೇಕು ಎಂದ ಜೈಶಂಕರ್, ಚರ್ಚೆಗಳು ಮಾತ್ರ ಸಾಕಾಗುವುದಿಲ್ಲ. ಸಂಘಟಿತ ಹಾಗೂ ಪರಿಣಾಮಕಾರಿ ಕ್ರಮ ಅಗತ್ಯ” ಎಂದು ಅವರು ಹೇಳಿದರು.
ಜಾಗತಿಕ ಶಾಂತಿ ಮತ್ತು ಭದ್ರತೆಯ ಪ್ರಶ್ನೆಗಳು ಇನ್ನೂ ಅಂತಾರಾಷ್ಟ್ರೀಯ ವ್ಯವಸ್ಥೆಯ ಕೇಂದ್ರದಲ್ಲಿವೆ ಎಂದು ಹೇಳಿದ ಅವರು, ಇತ್ತೀಚಿನ ಸಂಘರ್ಷಗಳು ಸಂವಾದ ಮತ್ತು ರಾಜತಾಂತ್ರಿಕತೆಯ ಅಗತ್ಯವನ್ನು ಮತ್ತಷ್ಟು ಸ್ಪಷ್ಟಪಡಿಸಿವೆ ಎಂದು ಹೇಳಿದರು.
ವಿಶ್ವಸಂಸ್ಥೆಯ ಘೋಷಣಾಪತ್ರದ ತತ್ವಗಳಿಗೆ ಭಾರತ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಅವರು, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವುದು ಅಂತರರಾಷ್ಟ್ರೀಯ ಸಂಬಂಧಗಳ ಮೂಲಭೂತ ಅಡಿಪಾಯವಾಗಬೇಕು ಎಂದು ಹೇಳಿದರು.
ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಜೈಶಂಕರ್, ಗಾಜಾ ಸಂಘರ್ಷವು ಗಂಭೀರ ಮಾನವೀಯ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದರು.
“ಶಾಶ್ವತ ಕದನ ವಿರಾಮ, ಮಾನವೀಯ ನೆರವಿಗೆ ಅಡೆತಡೆಯಿಲ್ಲದ ಪ್ರವೇಶ ಹಾಗೂ ಶಾಂತಿಯುತ ಪರಿಹಾರಕ್ಕಾಗಿ ವಿಶ್ವಾಸಾರ್ಹ ಪ್ರಯತ್ನಗಳು ಅಗತ್ಯ” ಎಂದು ಅವರು ಅಭಿಪ್ರಾಯಪಟ್ಟರು.
ಭಯೋತ್ಪಾದನೆ ವಿರುದ್ಧ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದ ಜೈಶಂಕರ್, ಯಾವುದೇ ರೂಪದಲ್ಲಿಯೂ ಭಯೋತ್ಪಾದನೆಗೆ ಸಮರ್ಥನೆ ಇಲ್ಲ. ಗಡಿಯಾಚೆಗಿನ ಭಯೋತ್ಪಾದನೆ ಅಂತಾರಾಷ್ಟ್ರೀಯ ಸಂಬಂಧಗಳ ಮೂಲತತ್ವಗಳ ಉಲ್ಲಂಘನೆ. ಭಯೋತ್ಪಾದನೆ ವಿರುದ್ಧ ‘ಶೂನ್ಯ ಸಹಿಷ್ಣುತೆ’ ಜಾಗತಿಕ ಮಾನದಂಡವಾಗಬೇಕು” ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಬಹುಪಕ್ಷೀಯ ಸಂಸ್ಥೆಗಳ ಸುಧಾರಣೆ ಈಗ ಅನಿವಾರ್ಯವಾಗಿದೆ ಎಂದು ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಹಾಗೂ ಅಶಾಶ್ವತ ಸದಸ್ಯತ್ವ ವರ್ಗಗಳಲ್ಲಿ ಸುಧಾರಣೆ ತರಬೇಕೆಂದು ಅವರು ಪುನರುಚ್ಚರಿಸಿದ್ದು, “ನಮ್ಮ ಕಾಲದ ಸ್ಪಷ್ಟ ಸಂದೇಶ ಸಹಕಾರವೇ ಅಗತ್ಯ, ಮಾತುಕತೆ ಅನಿವಾರ್ಯ ಮತ್ತು ಸುಧಾರಣೆಯನ್ನು ಇನ್ನಷ್ಟು ವಿಳಂಬ ಮಾಡಲಾಗುವುದಿಲ್ಲ” ಎಂದು ಜೈಶಂಕರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.