
ಕೋಲಾರ, ಏಪ್ರಿಲ್ ೦೯ (ಹಿ.ಸ) :
ಆ್ಯಂಕರ್ : ಇಂದಿನ ಕೃಷಿ ಪದ್ಧತಿಯಲ್ಲಿ ನಾವು ಅರಿವಿಲ್ಲದೆಯೇ ವಿಷವನ್ನು ಬೆಳೆದು ನಮ್ಮ ಮಕ್ಕಳಿಗೆ ಉಣಬಡಿಸುತ್ತಿದ್ದೇವೆ. ಈ ಅಪಾಯಕಾರಿ ಧೋರಣೆ ಬದಲಾಗಿ, ಜಿಲ್ಲೆಯ ಕೃಷಿಕರು ವಿಷಮುಕ್ತ ಆಹಾರ ಉತ್ಪಾದನೆಯತ್ತ ಹೆಜ್ಜೆ ಹಾಕಬೇಕು, ಎಂದು ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಕರೆ ನೀಡಿದರು.
ಕೃಷಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆಡಿಟೋರಿಯಂನಲ್ಲಿ ವಿಷಮುಕ್ತ ಆಹಾರ ಉತ್ಪಾದನೆ ಕಡೆಗೆ ಕೋಲಾರ ಜಿಲ್ಲೆಯ ಒಂದು ಹೆಜ್ಜೆ ಎಂಬ ಪರಿಕಲ್ಪನೆಯೊಂದಿಗೆ ಹಮ್ಮಿಕೊಂಡಿದ್ದ 'ಜೈವಿಕ ಗೊಬ್ಬರ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ'ವನ್ನು ಉದ್ಘಾಟಿಸಿ ಮಾತನಾಡಿದರು.
ಕೋಲಾರದ ಕೃಷಿಕರು ಇನ್ನು ಮುಂದೆ ವಿಷಮುಕ್ತ ಆಹಾರ ಉತ್ಪಾದನೆಯ ಕಡೆಗೆ ಗಮನ ಹರಿಸಬೇಕು. ಈ ಅರಿವು ಕಾರ್ಯಕ್ರಮ ಕೇವಲ ಜಿಲ್ಲಾ ಮಟ್ಟಕ್ಕೆ ಸೀಮಿತವಾಗದೆ ತಾಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟಕ್ಕೂ ತಲುಪಬೇಕು. ಕೃಷಿ ಎನ್ನುವುದು ಕೇವಲ ಶ್ರಮವಲ್ಲ, ಅದೊಂದು ವಿಜ್ಞಾನ. ವಿವಿಗಳ ಜ್ಞಾನ ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಭೂಮಿಯಲ್ಲಿ ಪ್ರಯೋಗವಾಗಬೇಕು. ವೈಜ್ಞಾನಿಕ ನೆಲೆಯಲ್ಲಿ ಕೃಷಿಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.
ರೈತರು ಬೆಳೆಗಳಿಗೆ ರೋಗ ಬಂದಾಗ ನೇರವಾಗಿ ರಸಗೊಬ್ಬರಗಳ ಮಳಿಗೆಳಿಗೆ ಹೋಗುವ ಬದಲು ತಜ್ಞರ ಸಲಹೆ ಪಡೆಯಲು 'ಅಗ್ರಿ ಕ್ಲಿನಿಕ್'ಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಇರುವ ರೈತ ಸಂಪರ್ಕ ಕೇಂದ್ರಗಳನ್ನು ಈ ನಿಟ್ಟಿನಲ್ಲಿ ಮೇಲ್ದರ್ಜೆಗೇರಿಸುವ ಯೋಜನೆಯಿದೆ. ನಗರ ಪ್ರದೇಶದ ಕಸ ಅಥವಾ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗೊಬ್ಬರವನ್ನಾಗಿ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಬಹುದು. ಇದನ್ನು 'ತ್ಯಾಜ್ಯ ಲಕ್ಷ್ಮಿ' ಪರಿಕಲ್ಪನೆಯಡಿ ಲಾಭದಾಯಕವಾಗಿ ಬಳಸಿಕೊಳ್ಳಬಹುದು. ಕೋಲಾರ ಜಿಲ್ಲೆಯ ತೋಟಗಾರಿಕೆ, ರೇಷ್ಮೆ ಮತ್ತು ಪಶುಸಂಗೋಪನೆ ಇಲಾಖೆಗಳನ್ನು ಒಳಗೊಂಡ ಸಮಗ್ರ ಕೃಷಿ ಅಭಿವೃದ್ಧಿಗೆ 'ರೋಡ್ ಮ್ಯಾಪ್' ಸಿದ್ಧಪಡಿಸಿ ನೀಲಿನಕ್ಷೆ ತಯಾರಿಸಲು ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದರು.
ಜಿಲ್ಲೆಯ ಶೇ. ೯೫ ರಷ್ಟು ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ. ಕೇವಲ ಎರಡು ಹಸುಗಳನ್ನು ಕಟ್ಟಿಕೊಂಡು ಮಕ್ಕಳನ್ನು ಇಂಜಿನಿಯರ್, ಡಾಕ್ಟರ್ ಮಾಡಿದ ಛಾತಿ ಕೋಲಾರದ ರೈತರಿಗಿದೆ. ಅಂತಹ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಾದರೆ ಮಾರುಕಟ್ಟೆ ತಂತ್ರಗಾರಿಕೆ ಮತ್ತು ಮೌಲ್ಯವರ್ಧನೆ ಅತ್ಯಗತ್ಯ . ಇದಕ್ಕಾಗಿಯೇ ಸಂಸ್ಕರಣ ಘಟಕ ತೆರೆಯಬೇಕೆಂದು ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಹಾಲಿನ ಕಲಬೆರಿಕೆ ಕಂಡುಬರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ಸಹ ನೀಡಿದರು.
ಕೃಷಿ ಜಂಟಿ ನಿರ್ದೇಶಕರಾದ ಜಾವೇದಾ ನಸೀಮಾ ಖಾನಮ್ ಮಾತನಾಡಿ ಜಿಲ್ಲೆಯ ಮಣ್ಣಿನ ಪರೀಕ್ಷಾ ವರದಿಗಳ ಪ್ರಕಾರ, ಮಣ್ಣಿನಲ್ಲಿ ಸಾರಜನಕ ಮತ್ತು ಸಾವಯವ ಇಂಗಾಲದ ಪ್ರಮಾಣ ಶೇ ೦.೫ಕ್ಕಿಂತ ಕಡಿಮೆಯಾಗಿದೆ. ರಾಸಾಯನಿಕ ಗೊಬ್ಬರಗಳ ಅತಿಯಾದ ಮತ್ತು ಅಸಮತೋಲಿತ ಬಳಕೆಯಿಂದ ಮಣ್ಣಿನ ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಮ್ಮ ಜಿಲ್ಲೆಗೆ ಅವಶ್ಯಕತೆಗಿಂತ ಎರಡು ಪಟ್ಟು ಹೆಚ್ಚು ರಸಗೊಬ್ಬರ ಬಳಕೆಯಾಗುತ್ತಿದೆ. ಇದನ್ನು ತಡೆದು ಸಮತೋಲಿತ ಗೊಬ್ಬರ ಬಳಕೆಗೆ ರೈತರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ವೃತ್ತಪತ್ರಿಕೆಗಳಲ್ಲಿ ಬಂದ ವರದಿಗಳಂತೆ ಕೋಲಾರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳೆಯುವ ಟೊಮ್ಯಾಟೋ, ಬೀನ್ಸ್ ಮುಂತಾದ ಬೆಳೆಗಳಲ್ಲಿ ಕೀಟನಾಶಕಗಳ ಅವಶೇಷಗಳು ಅಪಾಯಕಾರಿ ಮಟ್ಟದಲ್ಲಿವೆ. ಇದು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಪಂಜಾಬ್ನAತಹ ರಾಜ್ಯಗಳಲ್ಲಿ ಕಂಡು ಬ0ದ 'ಕ್ಯಾನ್ಸರ್ ಟ್ರೈನ್' ನಂತಹ ಪರಿಸ್ಥಿತಿ ನಮ್ಮ ಜಿಲ್ಲೆಗೆ ಬರುವುದು ಬೇಡ ಎಂದು ಅವರು ಎಚ್ಚರಿಸಿದರು.
ಕೀಟ ಮತ್ತು ರೋಗಗಳ ನಿಖರ ಗುರುತಿಸುವಿಕೆ ಹಾಗೂ ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಔಷಧ ಸಿಂಪಡಣೆ ಮಾಡಬೇಕು. ಒಂದೇ ಬೆಳೆಯನ್ನು ಪದೇ ಪದೇ ಬೆಳೆಯುವ ಬದಲು ಅಂತರ ಬೆಳೆ ಪದ್ಧತಿ ಅಳವಡಿಸಿಕೊಳ್ಳುವುದು ಮುಖ್ಯ ಈಗಾಗಲೇ ತಾಲ್ಲೂಕು ಮಟ್ಟದ ರಸಗೊಬ್ಬರ ಮತ್ತು ಕೀಟನಾಶಕ ಡೀಲರ್ಗಳಿಗೆ ತಾಂತ್ರಿಕ ತರಬೇತಿ ನೀಡಲಾಗಿದ್ದು, ಮುಂದಿನ ಹಂತದಲ್ಲಿ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ರೈತರಿಗೆ ತರಬೇತಿ ನೀಡಲಾಗುವುದು. ಕೃಷಿ ವಿಜ್ಞಾನ ಕೇಂದ್ರ ಮತ್ತು ಜಿಕೆವಿಕೆ ವಿಜ್ಞಾನಿಗಳ ಸಲಹೆ ಪಡೆದು ವಿಷಮುಕ್ತ ಕೃಷಿಯತ್ತ ಹೆಜ್ಜೆ ಇಡುವುದು ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿದ್ದು, ತಾಂತ್ರಿಕ ಮಾಹಿತಿ ಪಡೆದುಕೊಳ್ಳುವಂತೆ ಜಂಟಿ ನಿರ್ದೇಶಕರು ಕೋರಿದರು. ಈ ಕಾರ್ಯಕ್ರಮವು ಜಿಲ್ಲೆಯಲ್ಲಿ ಸುಸ್ಥಿರ ಮತ್ತು ಆರೋಗ್ಯಕರ ಕೃಷಿ ಪದ್ಧತಿಗೆ ನಾಂದಿಯಾಗಲಿದೆ ಎಂಬ ಆಶಯ ಅವರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕರಾದ ಎಸ್. ನಾಗರಾಜ್, ಐ.ಸಿ.ಎ.ಆರ್ ದೆಹಲಿಯ ನಿವೃತ್ತ ಸಹಾಯಕ ಮಹಾನಿರ್ದೇಶಕ ಡಾ. ಭಾಸ್ಕರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕುಮಾರಸ್ವಾಮಿ, ಕೃಷಿ ಕಾಲೇಜು ಡೀನ್ ಆಂಜಿನಪ್ಪ, ಕೋಲಾರ ಕೆ.ವಿ.ಕೆ ಮುಖ್ಯಸ್ಥ ಶಿವಾನಂದ ಹೊಂಗಲ್, ಪಶುಸಂಗೋಪನಾ ಇಲಾಖೆಯ ವಿಜಯ್ ಪಾಟೀಲ್, ವಾರ್ತಾ ಇಲಾಖೆಯ ಹಿರಿಯ ನಿರ್ದೇಶಕಿ ಡಾ. ಕೆ.ಎನ್.ಕವನ, ಇಫ್ಕೊ ಸಂಸ್ಥೆಯ ಚೇತನ್,ಅರೆಕಲ್ ಜೈವಿಕ ಗೊಬ್ಬರ ಸಂಸ್ಥೆಯ ಡಾ. ದಿವಾಕರ್ ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ತಜ್ಞರು ಹಾಗೂ ಜಿಲ್ಲೆಯ ನೂರಾರು ಪ್ರಗತಿಪರ ರೈತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್