
ಮಾಲೂರು, ೦೯ ಏಪ್ರಿಲ್ (ಹಿ.ಸ) :
ಆ್ಯಂಕರ್ : ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನಡೆದ ವೈಕುಂಠ ಏಕಾದಶಿ ಹಾಗೂ ಜನವರಿ ೧ರ ಹೊಸ ವರ್ಷದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಕಲಾವಿದರಿಗೆ ಈವರೆಗೂ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ, 'ಗಾನಸುಧಾ ಸಾಂಸ್ಕೃತಿಕ ಕಲಾ ಸಂಸ್ಥೆ'ಯ ಅಧ್ಯಕ್ಷ ಕೆ. ಗೌತಮ್ ರವರು ಮುಜರಾಯಿ ತಹಶೀಲ್ದಾರ್ ಹರಿಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಳೆದ ಜನವರಿ ತಿಂಗಳಿನಲ್ಲಿ ನಡೆದ ಕಾರ್ಯಕ್ರಮಗಳಿಗೆ ಸಂಬ0ಧಿಸಿದ0ತೆ ಒಟ್ಟು ಮೂರು ಬಿಲ್ಗಳು ಬಾಕಿ ಉಳಿದಿದ್ದು, ಕಲಾವಿದರು ಪದೇ ಪದೇ ಸಂಭಾವನೆ ಬಗ್ಗೆ ವಿಚಾರಿಸಿದರೂ ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ಗಣೇಶ್ಗೌಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ನ್ಯಾಯಬದ್ಧವಾಗಿ ಬರಬೇಕಾದ ಹಣವನ್ನು ಕೇಳಲು ಹೋದ ಕಲಾವಿದರಿಗೆ ಗಣೇಶ್ಗೌಡ ರವರು ಬೆದರಿಕೆ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಕಲಾವಿದರಿಗೆ ಈ ರೀತಿ ಅವಮಾನ ಮಾಡುತ್ತಿರುವುದು ಖಂಡನೀಯವಾಗಿದ್ದು, ಕೂಡಲೇ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಿ ನ್ಯಾಯ ಒದಗಿಸಿಕೊಡಬೇಕೆಂದು ಮುಜರಾಯಿ ಇಲಾಖೆಯ ತಹಶೀಲ್ದಾರ್ ಅವರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್