
ಜಮ್ಮು, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಶ್ರೀನಗರ ನಡುವಿನ ನೇರ ರೈಲು ಸಂಪರ್ಕಕ್ಕೆ ಐತಿಹಾಸಿಕ ಚಾಲನೆ ದೊರೆತಿದೆ. ವಂದೇ ಭಾರತ್ ವೇಗದ ರೈಲು ಸೇವೆಯನ್ನು ಗುರುವಾರ ಅಧಿಕೃತವಾಗಿ ಆರಂಭಿಸಲಾಯಿತು.
ಜಮ್ಮು ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಗಣ್ಯರು ಹಸಿರು ನಿಶಾನೆ ತೋರಿಸಿ ರೈಲಿ ಚಾಲನೆ ನೀಡಿದರು.
ಸುಮಾರು 266 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಮೇ 2ರಿಂದ ನಿಯಮಿತ ಸಂಚಾರ ಆರಂಭವಾಗಲಿದೆ. ಹೊಸದಾಗಿ ಅಳವಡಿಸಲಾದ 20 ಬೋಗಿಗಳ ರೇಕ್ ಮೂಲಕ ಪ್ರಯಾಣಿಕರ ಸಾಮರ್ಥ್ಯವನ್ನು ಬಹಳ ಮಟ್ಟಿಗೆ ಹೆಚ್ಚಿಸಲಾಗಿದೆ. ವಾರದಲ್ಲಿ ಆರು ದಿನಗಳು ರೈಲುಗಳು ಸಂಚರಿಸಲಿವೆ.
ಪ್ರಮುಖ ವೇಳಾಪಟ್ಟಿ:
ಜಮ್ಮು ತಾವಿಯಿಂದ ಬೆಳಿಗ್ಗೆ 6.20ಕ್ಕೆ ಹೊರಡುವ ರೈಲು 11.10ಕ್ಕೆ ಶ್ರೀನಗರ ತಲುಪಲಿದೆ. ಹಿಂತಿರುಗುವ ರೈಲು ಮಧ್ಯಾಹ್ನ 2 ಗಂಟೆಗೆ ಶ್ರೀನಗರದಿಂದ ಹೊರಟು ಸಂಜೆ ವೇಳೆಗೆ ಜಮ್ಮು ತಲುಪುತ್ತದೆ. ಇನ್ನೊಂದು ಜೋಡಿ ರೈಲುಗಳು ಬೆಳಿಗ್ಗೆ ಮತ್ತು ಮಧ್ಯಾಹ್ನ ಸಮಯದಲ್ಲಿ ಸಂಚರಿಸಲಿವೆ.
ಈ ರೈಲುಗಳು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ, ರಿಯಾಸಿ ಮತ್ತು ಬನಿಹಾಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ.
ಈ ಮಾರ್ಗದ ಪ್ರಮುಖ ಆಕರ್ಷಣೆಯಾಗಿ ವಿಶ್ವದ ಅತಿ ಎತ್ತರದ ರೈಲು ಕಮಾನು ಸೇತುವೆಯಾದ ಚೆನಾಬ್ ಸೇತುವೆ ಹಾಗೂ ಭಾರತದ ಮೊದಲ ಕೇಬಲ್ ಆಧಾರಿತ ರೈಲು ಸೇತುವೆಯಾದ ಅಂಜಿ ಖಾದ್ ಸೇತುವೆ ನಿರ್ಮಾಣಗೊಂಡಿವೆ.
ರೈಲಿನಲ್ಲಿ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರ್ ಪಿ ಎಫ್ ಸಿಬ್ಬಂದಿ ಹಾಗೂ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಕಾಶ್ಮೀರದ ತೀವ್ರ ಚಳಿಗಾಲವನ್ನು ಎದುರಿಸಲು ವಿಶೇಷ ತಾಪಮಾನ ನಿಯಂತ್ರಣ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ಈ ರೈಲು ಸೇವೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಸ್ಥಳೀಯ ಜನಜೀವನಕ್ಕೆ ಉತ್ತೇಜನ ನೀಡಲಿದೆ. ಜೊತೆಗೆ, ಸೇನೆಯ ಸಂಚಾರ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗೆ ವೇಗ ಮತ್ತು ಸುಗಮತೆ ಒದಗಿಸುವುದರಿಂದ ರಕ್ಷಣಾ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಜಮ್ಮು–ಶ್ರೀನಗರ ವಂದೇ ಭಾರತ್ ರೈಲು ಸೇವೆ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದ್ದು, ಉತ್ತರ ಭಾರತದ ಸಂಪರ್ಕ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa