
ನವದೆಹಲಿ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಶುಕ್ರವಾರ ಲಡಾಖ್ನ ಲೇಹ್ನಲ್ಲಿ ಹೈನುಗಾರಿಕೆ ಮತ್ತು ಸಹಕಾರಿ ವಲಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮವು ಕೇಂದ್ರೀಯ ಬೌದ್ಧ ಅಧ್ಯಯನ ಸಂಸ್ಥೆ (ಸಿಐಬಿಎಸ್) ಆವರಣದಲ್ಲಿ ನಡೆಯಲಿದ್ದು, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಹಾಗೂ ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ವಿನಯ ಕುಮಾರ್ ಸಕ್ಸೇನಾ ಉಪಸ್ಥಿತರಿರಲಿದ್ದಾರೆ.
ಸಹಕಾರ ಸಚಿವಾಲಯದ ಮಾಹಿತಿ ಪ್ರಕಾರ, ಲಡಾಖ್ ಪ್ರದೇಶದಲ್ಲಿ ಹೈನುಗಾರಿಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾರ್ಗಿಲ್ನಲ್ಲಿ ದಿನಕ್ಕೆ 10 ಟನ್ ಸಾಮರ್ಥ್ಯದ ಡೈರಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಲಿದ್ದು, ಲೇಹ್ನಲ್ಲಿ ಮೊಸರು ಮತ್ತು ಚೀಸ್ ಉತ್ಪಾದನಾ ಘಟಕಗಳನ್ನು ಉದ್ಘಾಟಿಸಲಾಗುತ್ತದೆ.
ಹಾಲಿನ ಸಂಗ್ರಹಣೆ ಮತ್ತು ಸಾಗಣೆಯನ್ನು ಸುಧಾರಿಸಲು ಆಧುನಿಕ ತಂಪುಗೊಳಿಸುವ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ. ಜೊತೆಗೆ, ಡಿಜಿಟಲ್ ಸಬಲೀಕರಣಕ್ಕಾಗಿ ಆಂಡ್ರಾಯ್ಡ್ ಆಧಾರಿತ ಸ್ವಯಂಚಾಲಿತ ಹಾಲು ಸಂಗ್ರಹಣಾ ವ್ಯವಸ್ಥೆ (ಎಎಂಸಿಎಸ್) ಆಪ್ ಅನ್ನು ಪ್ರಾರಂಭಿಸಲಾಗುತ್ತದೆ. ಇದರಿಂದ ಹಾಲು ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚುವ ಜೊತೆಗೆ ರೈತರಿಗೆ ಪಾವತಿ ಪ್ರಕ್ರಿಯೆ ಸುಗಮವಾಗಲಿದೆ.
ಹಾಲಿನ ಗುಣಮಟ್ಟ ಪರಿಶೀಲನೆಗಾಗಿ ಸಂಚಾರಿ ಪರೀಕ್ಷಾ ಪ್ರಯೋಗಾಲಯಕ್ಕೂ ಚಾಲನೆ ನೀಡಲಾಗುತ್ತದೆ. ಹೈನು ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ವಿವಿಧ ಸಂಸ್ಥೆಗಳೊಂದಿಗೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮವೂ ಇರಲಿದೆ.
ಈ ವೇಳೆ ಪ್ರಗತಿಪರ ಹೈನುಗಾರರನ್ನು ಸನ್ಮಾನಿಸಲಾಗುತ್ತದೆ. ‘ಸಹಕಾರ್ ಸೇ ಸಮೃದ್ಧಿ’ ಪರಿಕಲ್ಪನೆಯನ್ನು ಮುಂದುವರಿಸುವ ಈ ಯೋಜನೆಗಳು, ದೂರದ ಲಡಾಖ್ ಪ್ರದೇಶದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa