ದೇಶದಲ್ಲಿ ಎಲ್ಪಿಜಿ ಪೂರೈಕೆ ಶೇ.100 ; ದಾಸ್ತಾನು ಕೊರತೆ ಇಲ್ಲ : ಕೇಂದ್ರ
ನವದೆಹಲಿ, 30 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಗೃಹಬಳಕೆಯ ಎಲ್ಪಿಜಿ (ಅಡುಗೆ ಅನಿಲ) ಪೂರೈಕೆ ಶೇ.100ರಷ್ಟು ಸಮರ್ಪಕವಾಗಿ ಲಭ್ಯವಿದ್ದು, ಎಲ್ಲಿಯೂ ದಾಸ್ತಾನು ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನವದೆಹಲಿಯಲ್ಲಿ ನ
ಸುಜಾತಾ ಶರ್ಮಾ


ನವದೆಹಲಿ, 30 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಗೃಹಬಳಕೆಯ ಎಲ್ಪಿಜಿ (ಅಡುಗೆ ಅನಿಲ) ಪೂರೈಕೆ ಶೇ.100ರಷ್ಟು ಸಮರ್ಪಕವಾಗಿ ಲಭ್ಯವಿದ್ದು, ಎಲ್ಲಿಯೂ ದಾಸ್ತಾನು ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿಯಲ್ಲಿ ನಡೆದ ಅಂತರ ಸಚಿವಾಲಯಗಳ ಸಂಯುಕ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ದೇಶದಾದ್ಯಂತ ಎಲ್ಪಿಜಿ ಪೂರೈಕೆ ನಿರಂತರವಾಗಿ ನಡೆಯುತ್ತಿದ್ದು, ಬುಕಿಂಗ್ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಲಾಗಿದೆ ಎಂದು ತಿಳಿಸಿದರು.

ಆನ್ಲೈನ್ ಮೂಲಕ ಎಲ್ಪಿಜಿ ಬುಕಿಂಗ್ ಪ್ರಮಾಣವು ಶೇ.98ರಷ್ಟಕ್ಕೆ ಏರಿಕೆಯಾಗಿದೆ. ವಿತರಣೆ ವ್ಯವಸ್ಥೆಯಲ್ಲೂ ಸುಧಾರಣೆ ಕಂಡುಬಂದಿದ್ದು, ಶೇ.93ರಷ್ಟು ಸಿಲಿಂಡರ್ಗಳನ್ನು ‘ಡಿಲಿವರಿ ಆಥೆಂಟಿಕೇಶನ್ ಕೋಡ್’ ಮೂಲಕ ವಿತರಿಸಲಾಗುತ್ತಿದೆ ಎಂದು ಹೇಳಿದರು. ಯಾವುದೇ ವಿತರಕರ ಬಳಿ ದಾಸ್ತಾನು ಕೊರತೆ ಉಂಟಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಾಣಿಜ್ಯ ಎಲ್ಪಿಜಿ ಪೂರೈಕೆಯೂ ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು, ಸದ್ಯಕ್ಕೆ ಶೇ.70ರಷ್ಟು ಪೂರೈಕೆ ಮರುಸ್ಥಾಪನೆಯಾಗಿದೆ. ಈ ತಿಂಗಳಲ್ಲಿ ಸುಮಾರು 1.92 ಲಕ್ಷ ಟನ್ ವಾಣಿಜ್ಯ ಎಲ್ಪಿಜಿ ಮಾರಾಟವಾಗಿದ್ದು, ನಿನ್ನೆ ಮಾತ್ರ 8,500 ಟನ್ ಮಾರಾಟವಾಗಿದೆ ಎಂದು ಮಾಹಿತಿ ನೀಡಿದರು.

ರಸಗೊಬ್ಬರಗಳ ಪೂರೈಕೆ ಸ್ಥಿರ

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಪರ್ಣಾ ಎಸ್. ಶರ್ಮಾ ಮಾತನಾಡಿ, ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆ ಸಮರ್ಪಕವಾಗಿದ್ದು, ಲಭ್ಯತೆ ಅಗತ್ಯಕ್ಕಿಂತ ಹೆಚ್ಚಿದೆ ಎಂದು ತಿಳಿಸಿದರು.

2026ರ ಮುಂಗಾರು ಅವಧಿಗೆ 390.54 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದ್ದರೆ, ಪ್ರಸ್ತುತ 193.38 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದ್ದು, ಇದು ಸುಮಾರು ಶೇ.50ರಷ್ಟಿದೆ ಎಂದು ಹೇಳಿದರು. ಯೂರಿಯಾ, ಡಿಎಪಿ ಸೇರಿದಂತೆ ಇತರ ರಸಗೊಬ್ಬರಗಳ ಲಭ್ಯತೆ ಸಮರ್ಪಕವಾಗಿದ್ದು, ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ದೇಶೀಯ ಉತ್ಪಾದನೆ ಹಾಗೂ ಆಮದುಗಳ ಸ್ಥಿರತೆಯಿಂದ ಒಟ್ಟು ಲಭ್ಯತೆ ಸುಮಾರು 78 ಲಕ್ಷ ಮೆಟ್ರಿಕ್ ಟನ್ ಹೆಚ್ಚಾಗಿದೆ ಎಂದು ಅವರು ಹೇಳಿದರು.

ನಾವಿಕರ ಸುರಕ್ಷತೆ; ಬಂದರು ಕಾರ್ಯಾಚರಣೆ ಸಾಮಾನ್ಯ

ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಕೇಶ್ ಮಂಗಲ್, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆ ನಾವಿಕರ ಸುರಕ್ಷತೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದುವರೆಗೂ 2,857ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಮರಳಿಸಲು ಸಹಾಯ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ 28 ಮಂದಿ ವಾಪಸಾಗಿದ್ದಾರೆ. ನಿಯಂತ್ರಣ ಕೊಠಡಿಗೆ 8,155 ಕರೆಗಳು ಹಾಗೂ 17,000ಕ್ಕೂ ಹೆಚ್ಚು ಇಮೇಲ್ಗಳು ಬಂದಿದ್ದು, ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande