
ಗದಗ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಆಟೋ ಚಾಲಕರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಸರ್ಕಾರದಿಂದಲೇ ‘ಎಲ್ಪಿಜಿ ಗ್ಯಾರಂಟಿ’ ಘೋಷಿಸಬೇಕು ಎಂಬ ಬೇಡಿಕೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಗದಗ ನಗರದಲ್ಲಿ ಆಟೋ ಸೇನೆ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿವಿಧ ಭಾಗಗಳಿಂದ ಸೇರಿಕೊಂಡ ಆಟೋ ಚಾಲಕರು, ತಮ್ಮ ದಿನನಿತ್ಯದ ಬದುಕು ಸಂಕಷ್ಟದಲ್ಲಿದೆ ಎಂದು ಆರೋಪಿಸಿದರು. ಬಹುತೇಕ ಆಟೋಗಳು ಎಲ್ಪಿಜಿ ಆಧಾರಿತವಾಗಿದ್ದು, ಇತ್ತೀಚೆಗೆ ಎಲ್ಪಿಜಿ ಕೊರತೆ ಹಾಗೂ ದರ ಏರಿಕೆಯಿಂದಾಗಿ ಚಾಲಕರು ಆರ್ಥಿಕವಾಗಿ ತತ್ತರಿಸಿದ್ದಾರೆ ಎಂದು ಹೇಳಿದರು.
ಪ್ರತಿಭಟನೆ ವೇಳೆ ಚಾಲಕರು, “ಪ್ರತಿ ದಿನ ಬದುಕು ಸಾಗಿಸುವುದೇ ಕಷ್ಟವಾಗಿದೆ. ಆದ್ದರಿಂದ ಸರ್ಕಾರವು ಪ್ರತಿ ಆಟೋ ಚಾಲಕರಿಗೂ ಕನಿಷ್ಠ ಎರಡು ಕೆಜಿ ಎಲ್ಪಿಜಿ ಮತ್ತು ಎರಡು ಲೀಟರ್ ಪೆಟ್ರೋಲ್ ಗ್ಯಾರಂಟಿಯಾಗಿ ನೀಡಬೇಕು” ಎಂದು ಒತ್ತಾಯಿಸಿದರು. ಈ ಮೂಲಕ ತಮ್ಮ ಜೀವನೋಪಾಯವನ್ನು ಕಾಪಾಡಲು ನೆರವಾಗಬೇಕೆಂದು ಮನವಿ ಮಾಡಿದರು.
ಈ ವೇಳೆ ಹಿಂದೂ ಪರ ಸಂಘಟನೆ ಮುಖಂಡ ರಾಜು ಖಾನಪ್ಪನ್ನವರ ಮಾತನಾಡಿ, ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯ ಪರಿಣಾಮವೂ ತಮ್ಮ ಮೇಲೆ ಬಿದ್ದಿದೆ ಎಂದು ಚಾಲಕರು ದೂರಿದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದ ನಂತರ, ಸಾರ್ವಜನಿಕರು ಆಟೋ ಸೇವೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಇದರಿಂದ ಆದಾಯದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಅವರು ಹೇಳಿದರು.
ಈ ನಡುವೆ ಇಂಧನ ದರ ಏರಿಕೆ, ಎಲ್ಪಿಜಿ ಸಿಲಿಂಡರ್ ಕೊರತೆ ಮತ್ತು ಬಂಕ್ಗಳಲ್ಲಿ ದರ ವ್ಯತ್ಯಾಸ ಇವುಗಳು ಚಾಲಕರ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿವೆ. ದಿನಗೂಲಿ ಆಧಾರಿತ ಜೀವನ ನಡೆಸುವ ಚಾಲಕರಿಗೆ ಇದು ದೊಡ್ಡ ಹೊರೆ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಭಟನೆಯ ವೇಳೆ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ಆಟೋ ಚಾಲಕರಿಗಾಗಿ ವಿಶೇಷ ಗ್ಯಾರಂಟಿ ಯೋಜನೆ ಜಾರಿಗೆ ತರಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಒಟ್ಟಾರೆ, ಎಲ್ಪಿಜಿ ಕೊರತೆ, ಇಂಧನ ದರ ಏರಿಕೆ ಮತ್ತು ಪ್ರಯಾಣಿಕರ ಸಂಖ್ಯೆ ಕುಸಿತ, ಗದಗ ಆಟೋ ಚಾಲಕರ ಜೀವನಕ್ಕೆ ದೊಡ್ಡ ಹೊಡೆತ ನೀಡಿದ್ದು, ಸರ್ಕಾರದ ತುರ್ತು ಕ್ರಮದತ್ತ ಚಾಲಕರು ಕಾದು ನೋಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP