
ಕೋಲ್ಕತ್ತಾ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಭಾರಿ ವಿಶ್ವಾಸ ವ್ಯಕ್ತಪಡಿಸಿದ್ದು, ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.
ಶನಿವಾರ ಕೋಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದ ಮತದಾನದ ನಂತರ ರಾಜ್ಯದ ರಾಜಕೀಯ ವಾತಾವರಣ ಸಂಪೂರ್ಣವಾಗಿ ಬಿಜೆಪಿ ಪರವಾಗಿದೆ ಎಂದು ಅಭಿಪ್ರಾಯಪಟ್ಟರು.
“2016 ಮತ್ತು 2019ರ ಚುನಾವಣೆಯಲ್ಲೂ ನಾನು ಬಂಗಾಳಕ್ಕೆ ಬಂದಿದ್ದೇನೆ. ಆದರೆ ಈ ಬಾರಿ ಕಾಣುತ್ತಿರುವ ಸಾರ್ವಜನಿಕ ಬೆಂಬಲ ಹಿಂದಿನ ಎಲ್ಲ ಅನುಭವಗಳನ್ನು ಮೀರಿ ಹೋಗಿದೆ,” ಎಂದು ಹೇಳಿದರು.
ಮತದಾರರ ಮನಸ್ಸಿನ ಗೊಂದಲಗಳು ಈ ಬಾರಿ ದೂರವಾಗಿದ್ದು, ಅವರು ಸ್ಪಷ್ಟವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಶರ್ಮಾ ತಿಳಿಸಿದ್ದಾರೆ. ಮೊದಲ ಹಂತದಲ್ಲಿಯೇ ಪಕ್ಷವು ದೊಡ್ಡ ಮುನ್ನಡೆ ಸಾಧಿಸಿದ್ದು, ಸುಮಾರು 110 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
“ಬಿಜೆಪಿ 200 ಸ್ಥಾನಗಳನ್ನು ದಾಟಿದರೆ ಆಶ್ಚರ್ಯಪಡಬೇಕಾಗಿಲ್ಲ,” ಎಂದು ಹೇಳಿದ ಅವರು, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಸ್ಪಷ್ಟ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದರ ಜೊತೆಗೆ, ಅಸ್ಸಾಂ ರಾಜ್ಯದಲ್ಲಿಯೂ ಬಿಜೆಪಿ ಬಲಿಷ್ಠವಾಗಿ ಮರುಪ್ರವೇಶಿಸಲಿದೆ ಎಂದು ಶರ್ಮಾ ಹೇಳಿದ್ದಾರೆ. “ಅಸ್ಸಾಂನಲ್ಲಿ ಈ ಬಾರಿ ನಾವು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಬಲವಾದ ಸರ್ಕಾರ ರಚಿಸುತ್ತೇವೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa