
ನವದೆಹಲಿ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ನಾಯಕರಾದ ಪವನ್ ಖೇರಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಗುವಾಹಟಿ ಹೈಕೋರ್ಟ್ ನೀಡಿದ ನಿರೀಕ್ಷಣಾ ಜಾಮೀನು ತಿರಸ್ಕಾರ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರತಿಕ್ರಿಯಿಸಿ, “ಖೇರಾ ಅವರೊಂದಿಗೆ ಇಡೀ ಕಾಂಗ್ರೆಸ್ ಪಕ್ಷ ನಿಂತಿದೆ. ಬೆದರಿಕೆ ಮತ್ತು ಕಿರುಕುಳದ ರಾಜಕೀಯದ ಮೇಲೆ ನ್ಯಾಯ ಗೆಲ್ಲುತ್ತದೆ ಎಂಬ ವಿಶ್ವಾಸ ನಮ್ಮಲ್ಲಿದೆ,” ಎಂದು ತಿಳಿಸಿದ್ದಾರೆ.
ಈ ಪ್ರಕರಣ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಸಲ್ಲಿಸಿದ ಕ್ರಿಮಿನಲ್ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿದೆ. ಏಪ್ರಿಲ್ 5ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪವನ್ ಖೇರಾ ಅವರು ರಿನಿಕಿ ಭುಯಾನ್ ಶರ್ಮಾ ವಿದೇಶದಲ್ಲಿ ಬಹು ಪಾಸ್ಪೋರ್ಟ್ಗಳು ಮತ್ತು ಆಸ್ತಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪದ ಮೇಲೆ ಗುವಾಹಟಿ ಅಪರಾಧ ಶಾಖೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರ ನಂತರ, ಏಪ್ರಿಲ್ 7ರಂದು ಅಸ್ಸಾಂ ಪೊಲೀಸರು ಖೇರಾ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದರು. ಏಪ್ರಿಲ್ 10ರಂದು ತೆಲಂಗಾಣ ಹೈಕೋರ್ಟ್ ಅವರು ಒಂದು ವಾರದ ನಿರೀಕ್ಷಣಾ ಜಾಮೀನು ನೀಡಿದರೂ, ಏಪ್ರಿಲ್ 15ರಂದು ಸುಪ್ರೀಂ ಕೋರ್ಟ್ ಆ ಆದೇಶಕ್ಕೆ ತಡೆ ನೀಡಿತ್ತು.
ಏಪ್ರಿಲ್ 21ರಂದು ಗುವಾಹಟಿ ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿ, ಏಪ್ರಿಲ್ 24ರಂದು ಖೇರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಈ ಹಿನ್ನೆಲೆ, ಕಾಂಗ್ರೆಸ್ ಪಕ್ಷವು ಕಾನೂನು ಹೋರಾಟ ಮುಂದುವರೆಸಿ, ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಕ್ಕಾಗಿ ಹೋರಾಡುವುದಾಗಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa