
ಜೈಪುರ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜೈಪುರದಲ್ಲಿ ನಡೆದ ರಾಜಸ್ಥಾನ ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭಾಗವಹಿಸಿ ಪದವೀಧರರಿಗೆ ಮಹತ್ವದ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಕರು ಉದ್ಯೋಗವನ್ನು ಹುಡುಕುವವರಾಗಿರದೆ ಉದ್ಯೋಗವನ್ನು ಸೃಷ್ಟಿಸುವವರಾಗಬೇಕು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಕರೆ ನೀಡಿದರು. ಶಿಕ್ಷಣವು ನವೀನತೆ, ನೈತಿಕತೆ ಮತ್ತು ಸಾಮಾಜಿಕ ಪ್ರಗತಿಗೆ ದಾರಿ ತೋರಿಸುವ ಶಕ್ತಿಯಾಗಬೇಕು ಎಂದು ಅವರು ಒತ್ತಿ ಹೇಳಿದರು.
“ಅನುಭೂತಿ ಇಲ್ಲದ ಶ್ರೇಷ್ಠತೆ ಅಪೂರ್ಣ” ಎಂಬ ಸಂದೇಶದ ಮೂಲಕ ವಿದ್ಯಾರ್ಥಿಗಳು ಮೌಲ್ಯಗಳು, ಸ್ಥೈರ್ಯ ಮತ್ತು ಸಹಾನುಭೂತಿಯೊಂದಿಗೆ ಜೀವನದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಮಹಿಳೆಯರ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರು ತೋರಿಸುತ್ತಿರುವ ಸಾಧನೆ ಶ್ಲಾಘನೀಯವಾಗಿದೆ ಎಂದರು. ನಿಜವಾದ ಅಭಿವೃದ್ಧಿ ಹೊಂದಿದ ರಾಷ್ಟ್ರವು ಮಹಿಳೆಯರಿಗೆ ಸಮಾನ ಅವಕಾಶ, ಗೌರವ ಮತ್ತು ನಾಯಕತ್ವದ ಸ್ಥಾನಗಳನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಮಾರಂಭದಲ್ಲಿ ರಾಜಸ್ಥಾನದ ರಾಜ್ಯಪಾಲ ಹರಿಭಾವು ಕಿಸನ್ರಾವ್ ಬಾಗ್ಡೆ, ಉಪಮುಖ್ಯಮಂತ್ರಿ ಪ್ರೇಮ್ ಚಂದ್ ಬೈರ್ವಾ, ರಾಜ್ಯಸಭಾ ಸದಸ್ಯ ರಾಧಾ ಮೋಹನ್ ದಾಸ್ ಅಗರವಾಲ್ ಹಾಗೂ ವಿಶ್ವವಿದ್ಯಾಲಯದ ಕುಲಪತಿ ಅಲ್ಪನಾ ಕಟೇಜಾ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa