
ನವದೆಹಲಿ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಹೊಸ ಬಂಗಲೆ ವಿಚಾರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಭಾರತೀಯ ಜನತಾ ಪಕ್ಷ ತೀವ್ರ ಟೀಕೆ ವ್ಯಕ್ತಪಡಿಸಿದೆ. ಎಎಪಿಯನ್ನು ‘ಆಲಿಶನ್ ಆದ್ಮಿ ಪಾರ್ಟಿ’ ಎಂದು ಮರುನಾಮಕರಣ ಮಾಡಬೇಕು ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರ್ವೇಶ್ ವರ್ಮಾ, ಕೇಜ್ರಿವಾಲ್ ಸರಳ ಜೀವನಶೈಲಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ, ಈಗ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಜ್ರಿವಾಲ್ ಅವರ ಹೊಸ ನಿವಾಸದ ಚಿತ್ರಗಳನ್ನು ಬಿಡುಗಡೆ ಮಾಡಿದ ಅವರು, “ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನರು ಔಷಧಕ್ಕಾಗಿ ಹೋರಾಡುತ್ತಿದ್ದಾಗ, ‘ಶೀಶ್ ಮಹಲ್’ ನಿರ್ಮಾಣ ನಿಂತಿರಲಿಲ್ಲ. ಈಗ ಮತ್ತೊಂದು ಐಷಾರಾಮಿ ಬಂಗಲೆ ನಿರ್ಮಿಸಲಾಗಿದೆ” ಎಂದು ಟೀಕಿಸಿದರು.
ಅಣ್ಣಾ ಹಜಾರೆ ಚಳವಳಿಯ ಸಮಯದಲ್ಲಿ ಕೇಜ್ರಿವಾಲ್ ಸರಳ ಬದುಕು ನಡೆಸುವುದಾಗಿ, ಸರ್ಕಾರಿ ಬಂಗಲೆ ಹಾಗೂ ಕಾರು ಬಳಸುವುದಿಲ್ಲ ಎಂದು ಅಫಿಡವಿಟ್ ನೀಡಿದ್ದರು. ಆದರೆ ಈಗ ಆ ಭರವಸೆಗಳನ್ನು ಮೀರಿ ನಡೆದುಕೊಂಡಿದ್ದಾರೆ ಎಂದು ವರ್ಮಾ ಹೇಳಿದರು. ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಉಲ್ಲೇಖಿಸಿ ಜನರ ವಿಶ್ವಾಸ ಗಳಿಸಿದ್ದರೂ, ಆ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಇದಲ್ಲದೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸುತ್ತಲಿನ ಸರ್ಕಾರಿ ಮನೆಗಳನ್ನೂ ಎಎಪಿ ನಾಯಕರು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಇದರಿಂದ ಆಡಳಿತದ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಹೇಳಿದರು.
ಎಎಪಿ ಸಂಸದರು ಬಿಜೆಪಿಗೆ ಸೇರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವರ್ಮಾ, “ಕೇಜ್ರಿವಾಲ್ ಅವರ ಆಡಳಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತ ನಾಯಕರು ಪಕ್ಷವನ್ನು ತೊರೆಯುತ್ತಿದ್ದಾರೆ” ಎಂದು ಹೇಳಿದರು.
ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಲೋಧಿ ಎಸ್ಟೇಟ್ ಪ್ರದೇಶದಲ್ಲಿರುವ ಟೈಪ್-VII ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಂಡಿರುವುದು ಈ ವಿವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa