ಹೆರಾಯಿನ್ ಕಳ್ಳಸಾಗಣೆ ಪ್ರಕರಣ ; 6 ಪಾಕಿಸ್ತಾನಿಗಳಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ
ಆರೋಪಪಟ್ಟಿ
Accused


ಕಚ್, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗುಜರಾತ್ ರಾಜ್ಯದ ಕಚ್ ಜಿಲ್ಲೆಯ ಜಖೌ ಸಮುದ್ರ ತೀರದಲ್ಲಿ 2021ರಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಹೆರಾಯಿನ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭುಜ್ ವಿಶೇಷ ಎನ್‌.ಡಿ.ಪಿ.ಎಸ್‌ ನ್ಯಾಯಾಲಯವು ಕಠಿಣ ತೀರ್ಪು ನೀಡಿದೆ. ಭಾರತಕ್ಕೆ ₹380 ಕೋಟಿ ಮೌಲ್ಯದ ಹೆರಾಯಿನ್ ಕಳ್ಳಸಾಗಣೆ ಮಾಡಲು ಸಂಚು ರೂಪಿಸಿದ್ದ ಆರು ಪಾಕಿಸ್ತಾನಿ ಪ್ರಜೆಗಳಿಗೆ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಲಾಗಿದೆ.

ಪ್ರಕರಣದ ವಿವರ :

2021ರ ಡಿಸೆಂಬರ್ ತಿಂಗಳಲ್ಲಿ ಗುಪ್ತಚರ ಮೂಲಗಳಿಂದ ಪಾಕಿಸ್ತಾನದ ಕರಾಚಿ ಬಂದರಿನಿಂದ “ಅಲ್ ಹುಸೇನಿ” ಎಂಬ ದೋಣಿಯಲ್ಲಿ ಭಾರಿ ಪ್ರಮಾಣದ ಮಾದಕವಸ್ತು ಸಾಗುತ್ತಿದೆ ಎಂಬ ಮಾಹಿತಿ ಗುಜರಾತ್ ಎ.ಟಿ.ಎಸ್ ಗೆ ಲಭಿಸಿತು. ಈ ಹಿನ್ನೆಲೆ ಎಟಿಎಸ್ ಹಾಗೂ ಭಾರತೀಯ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆ ನಡೆಸಿ, ಡಿಸೆಂಬರ್ 20ರಂದು ಜಖೌ ಸಮುದ್ರ ಪ್ರದೇಶದಲ್ಲಿ ದೋಣಿಯನ್ನು ತಡೆಹಿಡಿದರು. ಪರಿಶೀಲನೆ ವೇಳೆ ಆರು ಮಂದಿ ಪಾಕಿಸ್ತಾನಿ ಪ್ರಜೆಗಳು ದೋಣಿಯಲ್ಲಿ ಇದ್ದುದು ಪತ್ತೆಯಾಗಿದ್ದು, ಅವರಿಂದ ₹380 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಯಿತು.

ತನಿಖೆ ಮತ್ತು ಸಾಕ್ಷ್ಯಾಧಾರಗಳು :

ಡಿಸೆಂಬರ್ 21, 2021ರಂದು ಎನ್‌.ಡಿ.ಪಿ.ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು. ತನಿಖೆ ಸಂದರ್ಭದಲ್ಲಿ ಜಿಪಿಎಸ್ ಡೇಟಾ, ದೋಣಿಯ ಮಾರ್ಗ, ಮೊಬೈಲ್ ಕರೆ ದಾಖಲೆಗಳು, ಅಂತಾರಾಷ್ಟ್ರೀಯ ಸಂಪರ್ಕಗಳು ಹಾಗೂ ವಿಧಿವಿಜ್ಞಾನ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಎಟಿಎಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ 203 ದಾಖಲೆ ಸಾಕ್ಷ್ಯಗಳು ಹಾಗೂ 13 ಸಾಕ್ಷಿಗಳನ್ನು ಮಂಡಿಸಲಾಯಿತು.

ನ್ಯಾಯಾಲಯದ ತೀರ್ಪು:

ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಗಳನ್ನು ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8(c), 22(c), 25 ಮತ್ತು 29ರ ಅಡಿಯಲ್ಲಿ ದೋಷಿಗಳೆಂದು ಘೋಷಿಸಿ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ನ್ಯಾಯಾಲಯ ತನ್ನ ತೀರ್ಪಿನಲ್ಲಿ ಮಾದಕವಸ್ತು ಕಳ್ಳಸಾಗಣೆ ದೇಶದ ಯುವಜನತೆ ಮತ್ತು ಆಂತರಿಕ ಭದ್ರತೆ ಗೆ ಗಂಭೀರ ಬೆದರಿಕೆ ಎಂದು ಅಭಿಪ್ರಾಯಪಟ್ಟಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande